ಬಸವನಗುಡಿ ಕ್ಷೇತ್ರದ ಮದ್ದೂರಮ್ಮ ಆಟದ ಮೈದಾನದ ಮೇಲೆ ಶಾಸಕರ ಕಣ್ಣು: ವಿರೋಧದ ನಡುವೆಯೂ ಕಟ್ಟಡ ನಿರ್ಮಾಣಕ್ಕೆ ಸಜ್ಜು

basavanagudi Srinagar madduramma temple playground
Published on

ಬೆಂಗಳೂರು: ಬಸವನಗುಡಿ ಕ್ಷೇತ್ರದ ಶ್ರೀನಗರದ ಮದ್ದೂರಮ್ಮ ದೇವಸ್ಥಾನ ಮುಂಭಾಗದ ಆಟದ ಮೈದಾನದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಾಸಕ ರವಿ ಸುಬ್ರಮಣ್ಯ ಮುಂದಾಗಿದ್ದು, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ಮದ್ದೂರಮ್ಮ ದೇವಸ್ಥಾನ ಮುಂಭಾಗದ ಆಟದ ಮೈದಾನದಲ್ಲಿ ಸುತ್ತಮುತ್ತಲ ಯುವಕರು, ಮಕ್ಕಳು ನಿತ್ಯ ಆಟವಾಡುತ್ತಿದ್ದಾರೆ. ಸಾರ್ವಜನಿಕರು ವಾಕಿಂಗ್​ಗೆ ಬರುತ್ತಾರೆ. ಇದೀಗ ಈ ಮೈದಾನದಲ್ಲಿ ಕಾಲೇಜು ಕಟ್ಟಲು ಸ್ಥಳೀಯ ಶಾಸಕು ಮುಂದಾಗಿದ್ದಾರೆ. ಬೇರೆ ಕಡೆ ಕಾಲೇಜು ನಿರ್ಮಿಸಿ. ಆಟವಾಡಲು ಇರೋ ಜಾಗಕ್ಕೂ ಕಲ್ಲು ಹಾಕಿದ್ರೆ ಸ್ಥಳೀಯ ಮಕ್ಕಳು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದ್ದಾರೆ

ಆಟದ ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಿನ್ನೆ(ಸೋಮವಾರ) ಶಾಸಕ ರವಿ ಸುಬ್ರಮಣ್ಯ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ಸಾರ್ವಜನಿಕರು ಹಾಗೂ ಕೆಪಿಸಿಸಿ ವಕ್ತಾರ ಡಾ.ಶಂಕರ್​ ಗುಹಾ ಮೇಲೆ ಶಾಸಕ ರವಿ ಸುಬ್ರಮಣ್ಯ ಹರಿಹಾಯ್ದಿದ್ದಾರೆ.

ಆಟದ ಮೈದಾನದಲ್ಲಿ ಕಟ್ಟಡ ನಿರ್ಮಿಡಬೇಡಿ. ಬೇರೆ ಕಡೆ ಕಟ್ಟಿ ಎಂದ ಡಾ.ಶಂಕರ್​ ಗುಹಾ ವಿರುದ್ಧ ಸಿಟ್ಟಿಗೆದ್ದ ಶಾಸಕರು, ಯಾರ ಮಾತನ್ನು ಕೇಳುವ ಅಗತ್ಯ ನನಗಿಲ್ಲ ಎಂದರು. ಈ ನಡುವೆ ಶಾಸಕರ ಬೆಂಬಲಿಗರು ಮಧ್ಯ ಪ್ರವೇಶಿಸಿ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸಿದರು.

ಸ್ಥಳೀಯರ ಸಮಸ್ಯೆ ಬಗ್ಗೆ ಸಾವಧಾನವಾಗಿ ಆಲಿಸುವ ಬದಲು ಶಾಸಕರು ಜೋರಾಗಿ ಕೂಗಾಡುತ್ತಿದ್ದರು. ಚರ್ಚೆ ಅಥವಾ ಮಾತುಕತೆಗೆ ಅವಕಾಶ ನೀಡದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮತ್ತು ಸ್ಥಳಳೀಯರನ್ನು ಪೊಲೀಸರಿಂದ ಗೇಟಿನ ಆಚೆಗೆ ಹೊರದಬ್ಬಿಸಿದ್ದಾರೆ. ಹೇಗಾದರೂ ಮಾಡಿ ಮೈದಾನದಲ್ಲಿ ಕಾಮಗಾರಿ ನಡೆಸಲೇಬೇಕೆಂದು ಶಾಸಕರು ಹಠ ಮಾಡುತ್ತಿರುವುದು ಸರಿಯಲ್ಲ ಎಂದು ಡಾ.ಶಂಕರ್​ ಗುಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೇ ಮನೆಯಲ್ಲಿ ಎಲ್ಲ ಅಧಿಕಾರ ಅನುಭವಿಸುತ್ತಿರುವ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯಗೆ ಅಧಿಕಾರ ಮತ್ತು ಪದವಿಯ ಮದ ಏರಿದೆ. ಏನೇ ಮಾಡಿದರೂ ಪ್ರಶ್ನಿಸುವವರಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕಮಿಷನ್​ ಆಸೆಗಾಗಿ ಯಾವುದಾದರೂ ರೂಪದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲೇಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ. ಸಾರ್ವಜನಿಕರ ಕುಂದುಕೊರತೆ ಹಾಗೂ ಕ್ಷೇತ್ರದ ಹಿತದೃಷ್ಟಿ ಕುರಿತು ಯೋಚಿಸುವ ಮನಸ್ಥಿತಿಯನ್ನು ಇಬ್ಬರೂ ಕಳೆದುಕೊಂಡು ಅಧಿಕಾರದ ಅಮಲನ್ನು ತಲೆಗೆ ಏರಿಸಿಕೊಂಡಿದ್ದಾರೆ. ಮೈದಾನ ಉಳಿವಿಗಾಗಿ ನ್ಯಾಯಾಲಯದ ಮೊರೆ ಹೋಗುವ ಜತೆಗೆ ಹೋರಾಟವನ್ನೂ ನಡೆಸಲಾಗುವುದು ಎಂದು ಶಂಕರ್​ ಗುಹಾ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net