

ಬೆಂಗಳೂರು: ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ 30 ಕೋಟಿ ರೂ. ಮೌಲ್ಯದ ಜಾಗವನ್ನು ಪಾಲಿಕೆ ಶುಕ್ರವಾರ ವಶಪಡಿಸಿಕೊಂಡಿದೆ. ಪೊಲೀಸರ ಸಮ್ಮುಖದಲ್ಲಿ ಜೆಸಿಬಿ ಮೂಲಕ ಸ್ಥಳದಲ್ಲಿ ಕಟ್ಟಿದ ಕಟ್ಟಡ ಕಾಂಪೌಂಡ್ ಮತ್ತು ಶೆಡ್‌ಗಳನ್ನು ತೆರವುಗೊಳಿಸಿ ‘ಈ ಜಾಗ ಪಾಲಿಕೆ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ’ ಎಂಬ ಫಲಕವನ್ನು ಅಧಿಕಾರಿಗಳು ಅಳವಡಿಸಿದರು.
ಗಾಂಧಿಬಜಾರ್‌ನಲ್ಲಿ ಅಂದಾಜು 9 ಸಾವಿರ ಚದರಡಿ ಜಾಗದಲ್ಲಿ 1986ರಲ್ಲಿ ಮಾರುಕಟ್ಟೆ ಕಟ್ಟಲು ಪಾಲಿಕೆ ಮುಂದಾಗಿತ್ತು. 1988ರಲ್ಲಿ ನಿವೇಶನಗಳ ಭೂ ಸ್ವಾಧಿನಕ್ಕೆ ತಡೆ ನೀಡುವಂತೆ ಕೆಲವರು ಹೈಕೋರ್ಟ್ ನಲ್ಲಿ ಕೇಸ್ ಹಾಕಿದ್ದರು. ಸತತ 10 ವರ್ಷಗಳ ಕೇಸ್ ವಿಚಾರಣೆ ನಡೆಸಿದ ಕೋರ್ಟ್, ಪಾಲಿಕೆ ಪರ ತೀರ್ಪು ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಹಾಕಿದ್ದರು. ಬಳಿಕ, ಕೇಸ್ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ನ್ಯಾಯಾಲಯದ ಆದೇಶದ ಮೇರೆಗೆ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಯೆರಪ್ಪರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಈ ಜಾಗವನ್ನು ವಶ ಪಡಿಸಿಕೊಂಡಿದೆ.
ಕಾರು ಪಾರ್ಕಿಂಗ್ ನಿರ್ಮಾಣ: ಗಾಂಧಿ ಬಜಾರ್‌ಗೆ ಶಾಪಿಂಗ್ ತೆರಳುವ ಜನರಿಗೆ ಪಾಲಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದರಿಂದ ಶಾಪಿಂಗ್ ಹೊರಟ ಜನರಿಗೆ ಕಾರು ನಿಲ್ಲಿಸುವ ಸಮಸ್ಯೆಗೆ ಮುಕ್ತಿ ಸಿಗಲಿದೆ. ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಗಾಂಧಿ ಬಜಾರ್‌ನ ಪಾಲಿಕೆ ಜಾಗದಲ್ಲಿ 19 ಕೋಟಿ ರೂ.ವೆಚ್ಚದಲ್ಲಿ ಬಹುಮಹಡಿ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಮಾಡಲಿದೆ.
ಕಾರು ಪಾರ್ಕಿಂಗ್ ಜಾಗದಲ್ಲಿ ಶೌಚಗೃಹ ಸೇರಿ ಇತರೆ ಸೌಲಭ್ಯಗಳಿವೆ. ಈಗಾಗಲೇ ಟೆಂಡರ್ ಮುಗಿದಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಶುರುವಾಗಲಿದೆ. ಬಹುಮಹಡಿ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿನ ದಿನಗಳಷ್ಟೇ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.