

ಶಿವಮೊಗ್ಗ: ಎಚ್.ಎಸ್.ದೊರೆಸ್ವಾಮಿ ಅವರು ಒಬ್ಬ ಡೋಂಗಿ ಸ್ವಾತಂತ್ರ್ಯ ಹೋರಾಟಗಾರ. ಅವರ ವಿರುದ್ಧ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದು, ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ದೇಶ ಕಂಡ ಅಪ್ರತಿಮ ಸ್ವಾತಂತ್ರೃ ಹೋರಾಟಗಾರ. ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮೊದಲು ದೇಶದ ಕ್ಷಮೆಯಾಚಿಸಬೇಕು. ಆನಂತರ ನಾನು ಮಾತನಾಡುತ್ತೇನೆ ಎಂದಿದ್ದಾರೆ.
ವೀರ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಒಪ್ಪಿಕೊಳ್ಳದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ನಡುವೆ ದೊರೆಸ್ವಾಮಿ ಕೂಡ ಕಾಂಗ್ರೆಸ್‌ನ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಸಿಎಎ ವಿರೋಧಿಸುತ್ತಿರುವುದು ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನವಾಗಿದೆ. ಸ್ವಾತಂತ್ರೃ ಹೋರಾಟಗಾರರಾದವರು ಮತ್ತೊಬ್ಬ ಹೋರಾಟಗಾರರ ಬಗ್ಗೆ ಈ ರೀತಿ ನಡೆದುಕೊಳ್ಳಬಾರದು ಎಂದರು.
ಸಂವಿಧಾನದನ್ವಯವೇ ಸಿಎಎ ಕಾನೂನು ಜಾರಿಗೆ ತರಲಾಗಿದೆ. ಸಂವಿಧಾನದ ಬಗ್ಗೆ ಗೌರವ ಇಲ್ಲದವವರಿಗೆ ನನ್ನ ಬಗ್ಗೆ ಹೇಳಿಕೆ ನೀಡುವ ಅರ್ಹತೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಯತ್ನಾಳ್, ವೀರ ಸಾವರ್ಕರ್ ಬಗ್ಗೆ ಅವರು ಹಗುರವಾಗಿ ಮಾತನಾಡಿರುವ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ ಮತ್ತು ರಮೇಶ್‌ಕುಮಾರ್ ಮೊದಲು ಆತ್ಮವಲೋಕನ ಮಾಡಿಕೊಳ್ಳಬೇಕು. ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಾದಿಯಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಸಿಎಎ ವಿರುದ್ಧದ ಮಸೂದೆ ಪಾಸಾಗಿದೆ. ಆದರೂ ಸಿಎಎ ವಿರೋಧಿಸಿ ಬೀದಿಗಿಳಿದವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ. ಈ ಮೂಲಕ ಕಾಂಗ್ರೆಸ್ ಸಂವಿಧಾನ ವಿರೋಧಿಯಾಗಿದೆ. ಅವರೇನು ನನ್ನ ಬಗ್ಗೆ ಟೀಕಿಸೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಹುಬ್ಬಳಿ ಮತ್ತು ಬೆಂಗಳೂರು ಘಟನೆಗಳ ಬಗ್ಗೆ ಹಾಗೂ ದೇಶವಿರೋಧಿ ಪಾಕಿಸ್ತಾನದ ಬಗ್ಗೆ ಹೇಳಿಕೆ ಕೊಟ್ಟ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವುದಿಲ್ಲ ಎಂದ ಯತ್ನಾಳ್, ದೇಶದ ವಿರುದ್ಧ ಮಾತನಾಡುವರ ವಿರುದ್ಧ ಹೋರಾಟ ಮಾಡಲಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.