

ಬಸವನಬಾಗೇವಾಡಿ: ಪುರಸಭೆ ಮುಖ್ಯಾಧಿಕಾರಿ ಅವರು ಸಂತ ಶ್ರೀ ಸೇವಾಲಾಲರ ಜಯಂತಿ ಆಚರಣೆಗೆ ತತ್ಸಾರ ಮನೋಭಾವ ತಾಳಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಸೋಮವಾರ ಮಧ್ಯಾಹ್ನ ಮುಖ್ಯಾಧಿಕಾರಿಗಳ ಮೇಲೆ ಹರಿಹಾಯ್ದರು.
ಬಂಜಾರ ಸಮುದಾಯದ ಮುಖಂಡ ರವಿ ರಾಠೋಡ ಮಾತನಾಡಿ, ಸರ್ಕಾರದ ಆದೇಶ ಅನ್ವಯ ಸರ್ಕಾರಿ ಕಚೇರಿಗಳಲ್ಲಿ ಮಹಾ ಪುರುಷರ ಜಯಂತ್ಯುತ್ಸವವನ್ನು ಬೆಳಗ್ಗೆ 9ಗಂಟೆಯಿಂದ 10:30ರೊಳಗೆ ಆಚರಿಸುವ ನಿಯಮವಿದ್ದರೂ ಕಾಟಾಚಾರಕ್ಕೆ ಎಂಬಂತೆ ಸಂತ ಸೇವಾಲಾಲ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದ್ದಲ್ಲದೆ, ಪುರಸಭೆ ಸದಸ್ಯರಿಗೆ ಮುಂಚಿತವಾಗಿ ಜಯಂತಿ ಕಾರ್ಯಕ್ರಮದ ಕುರಿತಾಗಿ ತಿಳಿಸದೆ ಏಕಾಏಕಿಯಾಗಿ 10 ಗಂಟೆಗೆ ಸಂತ ಶ್ರೀ ಸೇವಾಲಾಲರ ಜಯಂತಿ ಕಾರ್ಯಕ್ರಮಕ್ಕೆ ಬರಬೇಕೆಂದು ದೂರವಾಣಿಯಲ್ಲಿ ತಿಳಿಸಿದ್ದು ಸರಿಯಾದ ಪದ್ಧತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಹಿರಿಯ ಸದಸ್ಯ ನೀಲಪ್ಪ ನಾಯಕ ಮಾತನಾಡಿ, ಸೇವಾಲಾಲ ಅವರ ಜಯಂತಿಯನ್ನು ಪ್ರತಿ ಸರ್ಕಾರಿ ಕಚೇರಿಯಲ್ಲಿ ಆಚರಿಸಬೇಕೆಂಬ ನಿಯಮವಿದ್ದರೂ ಅದನ್ನು ಧಿಕ್ಕರಿಸಿದ್ದೀರಿ. ಇದು ಸರ್ಕಾರದ ಆದೇಶಕ್ಕೆ ಹಾಗೂ ಮಹಾ ಪುರುಷರಿಗೆ ಮಾಡಿದ ಅಪಚಾರವಾಗಿದೆ. ಇದನ್ನೂ ಖಂಡಿಸುವ ಜತೆಗೆ ಪುರಸಭೆ ಇಲ್ಲವೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿ, ಜಯಂತಿ ಆಚರಣೆಗೂ ಮುನ್ನಾ ದಿನ ತಿಳಿಸಿದರೇ ಸದಸ್ಯರು ಯಾವುದೇ ಕಾರ್ಯವಿದ್ದರೂ ಹೊಂದಾಣಿಕೆ ಮಾಡಿಕೊಂಡು ಜಯಂತಿಗೆ ಬರುತ್ತೇವೆ. ಮಧ್ಯಾಹ್ನ 1 ಗಂಟೆಗೆ ಜಯಂತಿ ಆಚರಿಸುವುದು ಮುಖ್ಯಾಧಿಕಾರಿಗಳ ನಿರ್ಲಕ್ಷೃ ತೋರಿಸುತ್ತದೆ ಎಂದಾಗ, ಇದಕ್ಕೆ ಪುರಸಭೆ ಸದಸ್ಯ ದೇವೇಂದ್ರ ಚವ್ಹಾಣ ಮತ್ತಿತರರು ಧ್ವನಿಗೂಡಿಸಿದರು.
ಮುಖ್ಯಾಧಿಕಾರಿ ಬಿ.ಎ. ಸೌದಾಗರ ಮಾತನಾಡಿ, ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಪುರಸಭೆ ಸದಸ್ಯರಲ್ಲಿ ಕ್ಷಮೆ ಯಾಚಿಸಿದರು. ನಂತರ ಸರಳ ರೀತಿಯಲ್ಲಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ, ಉಪಾಧ್ಯಕ್ಷೆ ಲಕ್ಷ್ಮಿಂಬಾಯಿ ಬೆಲ್ಲದ, ಸದಸ್ಯರಾದ ರವಿ ಪಡಶೆಟ್ಟಿ, ರಾಜು ಭೂತನಾಳ, ರಾಜು ಲಮಾಣಿ, ಪ್ರವೀಣ ಪೂಜಾರಿ, ಅಶೋಕ ಗುಳೇದ, ಅಬೂಬ್ ಚೌಧರಿ, ಜಗದೇವಿ ಗುಂಡಳ್ಳಿ, ಮುಖಂಡರಾದ ಹರಿಲಾಲ ನಾಯಕ, ಕಾಶೀನಾಥ ರಾಠೋಡ, ಶಿವಾಜಿ ರಾಠೋಡ ಇತರರಿದ್ದರು.