

ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕವನ್ನು ಮಣ್ಣೂರ ಗ್ರಾ.ಪಂ. ಸ್ಥಾಪಿಸಲು ನಿರ್ಧರಿಸಿರುವುದನ್ನು ಕೈಬಿಡಬೇಕೆಂದು ಗ್ರಾಮಸ್ಥರು ಪ್ರತಿಭಟಿಸಿ ಗ್ರೇಡ್ 2 ತಹಸೀಲ್ದಾರ್ ಪಿ.ಜಿ. ಪವಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಉದ್ದೇಶಿತ ತ್ಯಾಜ್ಯ ಘಟಕಕ್ಕೆ ಸೂಚಿಸಿದ ಜಮೀನಿನಲ್ಲಿಯೇ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ತೆರೆದ ಬಾವಿ ಇದೆ ಹಾಗೂ ಸರ್ಕಾರಿ ಜಮೀನು ಪಕ್ಕದಲ್ಲಿಯೇ ತಾಂಡಾವಿದೆ. ಒಂದು ವೇಳೆ ಸಂಸ್ಕರಣಾ ಘಟಕ ಮಾಡಿದರೆ ಅಲ್ಲಿ ನೀರು ನಿಂತು ಕ್ರಿಮಿಕೀಟಗಳು ಉತ್ಪತ್ತಿಯಾಗಿ ತಾಂಡಾದ ಜನರಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ತೆರೆದ ಬಾವಿಯಲ್ಲಿನ ನೀರು ಮಲೀನಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಉದ್ದೇಶಿತ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು, ಕರವೇ, ರೈತ ಸಂಘಗಳ ನೇತೃತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯುವ ಮುಖಂಡ ಅಮರಯ್ಯ ಹಿರೇಮಠ, ಶಿವಾನಂದ ಹೆಬ್ಬಾಳ, ಹೊನ್ನಲಿಂಗೇಶ ಬೋಕಿ, ಮಹಾತೇಂಶ ಗೌರಾ, ಲಕ್ಷ್ಮಣ ಉಪ್ಪಾರ, ಮಲ್ಲಪ್ಪ ಪೂಜಾರಿ, ಯಮನೂರಿ ಪೂಜಾರಿ, ಗಿರೀಶ ಹೆಬ್ಬಾಳ, ಶರಣು ಮರೋಳ, ಬಸಪ್ಪ ಮುಳವಾಡ, ಚಂದ್ರು ಆಲಕೊಪ್ಪರ, ಶಿವಾನಂದ ಬೆಣ್ಣೂರ, ಮುತ್ತು ಪೂಜಾರಿ, ರಫೀಕ ವಾಲಿಕಾರ, ಬಸಲಿಂಗಯ್ಯ ಹಿರೇಮಠ, ಶರಣಗೌಡ ಬಿರಾದಾರ, ಸಂಗಪ್ಪ ನಾಲತವಾಡ, ಶರಣಪ್ಪ ಕ್ವಾಟಿ, ರಮೇಶ ನಿಡಗುಂದಿ, ಶ್ರೀಶೈಲ ತೆಲಗಿ ಇತರರಿದ್ದರು.