ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

BBGD-3-1
Published on

ಬಸವನಬಾಗೇವಾಡಿ: ಕಳೆದ 26 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ನಂತರ ಮರಳಿದ ಸೈನಿಕನನ್ನು ಪಟ್ಟಣದ ಶ್ರೀ ಬಸವೇಶ್ವರ (ಮೂಲನಂದೀಶ್ವರ) ದೇವಾಲಯದಿಂದ ಅವರ ಮನೆವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಡಿ.31ರಂದು ಸೇವಾ ನಿವೃತ್ತಿಯಾಗಿ ಪಟ್ಟಣಕ್ಕೆ ಭಾನುವಾರ ಆಗಮಿಸಿದ ಯೋಧ ಪರಸುರಾಮ ಬಸಪ್ಪ ಕಂದಗಲ್ಲ ಅವರಿಗೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ದೇಶಾಭಿಮಾನಿಗಳು ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದರು. ನಂತರ ಜಾನಪದ ಕಲಾ ತಂಡಗಳ ನಾದ ಮತ್ತು ಭಾರತ ಮಾತಾಕಿ ಜೈ ಎನ್ನುವ ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಬಸವೇಶ್ವರ ವೃತ್ತದಲ್ಲಿ ಹಾಯ್ದು ತೆಲಗಿ ರಸ್ತೆ ಮಾರ್ಗವಾಗಿ ನಾಗೂರ ರಸ್ತೆಯಲ್ಲಿರುವ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಯೋಧನ ಮನೆವರೆಗೆ ತೆರಳಿತು.

ನಿವೃತ್ತ ಯೋಧ ಪರಸುರಾಮ ಕಂದಗಲ್ ಮಾತನಾಡಿ, 1994ರಲ್ಲಿ ಆರ್ಮಿಯ ಎಎಂಸಿ ವಿಭಾಗದಲ್ಲಿ ನೇಮಕಗೊಂಡು 26 ವರ್ಷಗಳವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿರುವೆ. ಕಾರ್ಗಿಲ್ ಯುದ್ಧದ ವೇಳೆಯಲ್ಲಿ ದೇಶಕ್ಕೆ ಹಾಗೂ ಯುದ್ಧದಲ್ಲಿ ಹೋರಾಡುತ್ತಿರುವ ಸೈನಿಕರು ಗಾಯಗೊಂಡಾಗ ಉಪಚಾರ ನೀಡುವ ನಿಟ್ಟಿನಲ್ಲಿ ಪಂಜಾಬ್ ರಾಜ್ಯದ ಲೆಲ್‌ನಲ್ಲಿ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯವಾಗಿದೆ. ಆಂಬುಲೆನ್ಸ್ ಚಾಲಕನಾಗಿ ಸುದೀರ್ಘ ಅವಧಿವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಷಯವಾಗಿದೆ. ನಿವೃತ್ತಿ ನಂತರ ಊರಿಗೆ ಆಗಮಿಸಿದಾಗ ದೇಶಭಕ್ತರು ಸ್ವಾಗತ ನೀಡಿದ್ದು ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯತೆ ಭಾವ ಮೂಡಿಸಿದೆ ಎಂದರು.

ನಂತರ ಯೋಧನ ಮನೆಯ ಮುಂದೆ ಸ್ವಾಗತ ಕಾರ್ಯಕ್ರಮ ಆಯೋಜಿಸಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ದೇಶಾಭಿಮಾನಿಗಳು ಯೋಧ ಪರಸುರಾಮ ಅವರನ್ನು ಸನ್ಮಾನಿಸಿದರು.
ದೇಶಾಭಿಮಾನಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಜಿ. ಬಿರಾದಾರ, ಕಾರ್ಯದರ್ಶಿ ಆರ್.ಐ. ಬಿರಾದಾರ, ಮಾಜಿ ಸೈನಿಕರಾದ ಆರ್.ಎಸ್.ಪಾಟೀಲ, ಎಂ.ಎಸ್. ಬಿರಾದಾರ, ಎನ್.ಎಸ್. ಬೂದಿಗೂಳಿ, ಬಿ.ಎಸ್. ಹಳ್ಳಿ, ಪಿ.ಎಸ್. ಮುಕಾರ್ತಿಹಾಳ, ಎಂ.ಬಿ. ಕೂಡಗಿ, ಸಿ.ವೈ. ಪಾಟೀಲ, ಚಂದು ಲಮಾಣಿ, ಎಸ್.ಎ. ಜೀರ, ಡಾ. ಜಗದೀಶ ನಿಡಗುಂದಿ, ಬಿಜೆಪಿ ಮುಖಂಡ ಮುತ್ತು ಹಾಲಿಹಾಳ, ಭದ್ರು ಕಟ್ಟಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net