ಬಸವಲಿಂಗಪ್ಪ ಹೇಳಿಕೆ ಹೋರಾಟಕ್ಕೆ ಅಸ್ತ್ರವಾಯಿತು

15
Published on

ಮೈಸೂರು: ಕನ್ನಡದ ಜತೆಗೆ ಇಂಗ್ಲಿಷ್ ಅನ್ನು ಕಲಿಯಬೇಕು ಎನ್ನುವ ಅರ್ಥದಲ್ಲಿ ಬಸವಲಿಂಗಪ್ಪ ಅವರು ನೀಡಿದ ಹೇಳಿಕೆ ಸಾಹಿತ್ಯದ ಪುನರಾವಲೋಕನಕ್ಕೆ ಕಾರಣವಾಗದೆ ಹೋರಾಟದ ಅಸ್ತ್ರವಾಯಿತು ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ವಿಶ್ಲೇಷಿಸಿದರು.
ಒಡಲು ಟ್ರಸ್ಟ್ ಮತ್ತು ಸಂಶೋಧಕರ ವೇದಿಕೆಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಬೂಸಾ ಚಳವಳಿ- 50’ ಒಂದು ಅವಲೋಕನ ಮತ್ತು ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಯಬೇಕೆಂಬ ಸದುದ್ದೇಶದಿಂದ ಅಂದಿನ ಪೌರಾಡಳಿತ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯದಲ್ಲಿ ಬೂಸಾ ಇದೆ ಎಂದು ಹೇಳಿಕೆ ನೀಡಿದ್ದರು. ಆದರೆ ಅದು ತಪ್ಪಾಗಿ ಅರ್ಥವಾಗಿ ಬೂಸಾ ಚಳವಳಿಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
50 ವರ್ಷಗಳ ಹಿಂದೆ ಮೈಸೂರು ವಿಶ್ವ ವಿದ್ಯಾಲಯದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಸವಲಿಂಗಪ್ಪ ಅವರು ನೀಡಿದ ಇಂತಹ ಹೇಳಿಕೆ ಸಾಹಿತ್ಯದ ಪುನರಾವಲೋಕನಕ್ಕೆ ಕಾರಣವಾಗಬೇಕಾಗಿತ್ತು. ಆದರೆ ಅದು ಬೂಸಾ ಹೋರಾಟದ ಅಸ್ತ್ರವಾಯಿತು ಎಂದರು.
ಬಸವಲಿಂಗಪ್ಪ ಅವರ ವ್ಯಕ್ತಿತ್ವ ಮತ್ತು ಅವರು ಕರ್ನಾಟಕದಲ್ಲಿ ಮಾಡಿದ್ದ ಅಸಾಮಾನ್ಯ ಕೆಲಸ ಇಂದಿಗೂ ಎಲ್ಲೆಡೆ ಚರ್ಚೆಯಾಗುತ್ತಿದೆ. ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ಬಸವಲಿಂಗಪ್ಪ ಅವರು ಕಾಯ್ದೆ ಮೂಲಕ ನಿಷೇಧಿಸಿದ್ದು ಇಡೀ ದೇಶದಲ್ಲೇ ಮೊಟ್ಟಮೊದಲಾಗಿತ್ತು ಎಂದರು.
ಇಂತವರು ಕನ್ನಡದ ಜತೆಗೆ ಇಂಗ್ಲಿಷ್ ಅನ್ನೂ ಓದಿರಿ ಎಂಬ ವಿಚಾರ ದೀವಿಗೆಯನ್ನು ಬೆಳಗಿಸಲು ಅವರು ಪ್ರಯತ್ನಿಸಿದ್ದರು. ಆದರೆ ಅಂದಿನ ಸಮಕಾಲೀನ ರಾಜಕಾರಣ, ಸಾಂಪ್ರದಾಯಿಕ ಪಟ್ಟಭದ್ರ ಹಿತಾಸಕ್ತಿ ಈ ವಿಚಾರಕ್ಕೆ ಬೇರೆಯದೆ ರೂಪ ನೀಡಿದವು. ಹಾಗಾಗಿ ಕರ್ನಾಟಕದ ರಾಜಕೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಅದು ಬೂಸಾ ಪ್ರಕರಣ ಎಂದು ದಾಖಲಾಯಿತು ಎಂದು ಹೇಳಿದರು.
ರಾಜ್ಯ ದಸಂಸ ಚಾಲನ ಸಮಿತಿ ಸಂಚಾಲಕ ಇಂದೂಧರ ಹೊನ್ನಾಪುರ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಬಹುಪಾಲು ಬೂಸಾ ಇದೆ ಎಂಬ ಬಸವಲಿಂಗಪ್ಪ ಅವರ ಹೇಳಿಕೆ ಜಾತಿ ಜಗಳವಾಗಿ ಮಾರ್ಪಟ್ಟಿತ್ತು. ಬೂಸಾ ಚಳವಳಿ ಒಂದು ಚಳವಳಿಯಾಗಿ ರೂಪುಗೊಳ್ಳುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಹೇಳಿಕೆಯನ್ನು ಮೇಲ್ವರ್ಗದವರು ಅಸ್ತ್ರವಾಗಿಸಿಕೊಂಡು ದೊಡ್ಡ ಚಳವಳಿ ಮಾಡಿದರು. ದಲಿತ ಸಮುದಾಯದ ಬಸವಲಿಂಗಪ್ಪ ಅವರ ಬದಲಿಗೆ ಮೇಲ್ವರ್ಗದ ಜನರು ಈ ರೀತಿ ಮಾತನಾಡಿದರೆ ಅದು ಇಷ್ಟೊಂದು ಪರಿಣಾಮ ಉಂಟು ಮಾಡುತ್ತಿರಲಿಲ್ಲ ಎಂದರು.
ಸಾಹಿತಿ ಕಾಳೇಗೌಡ ನಾಗವಾರ, ಹೋರಾಟಗಾರ ಹರಿಹರ ಆನಂದಸ್ವಾಮಿ, ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕುಮಾರಸ್ವಾಮಿ ಕೂಡ್ಲಾಪುರ ಅವರು ಮುಕ್ತ ಸಂವಾದದಲ್ಲಿ ಭಾಗವಹಿಸಿದ್ದರು.
ಒಡಲು ಟ್ರಸ್ಟ್ ಅಧ್ಯಕ್ಷ ಆರ್.ಎಸ್.ದೊಡ್ಡಣ್ಣ ಅಧ್ಯಕ್ಷತೆ ವಹಿಸಿದ್ದರು. ಒಡಲು ಟ್ರಸ್ಟ್ ಧರ್ಮದರ್ಶಿ ಕುಪ್ಪೆ ನಾಗರಾಜ, ಕಾರ್ಯದರ್ಶಿ ಕೆ.ಎನ್. ಶಿವಲಿಂಗಯ್ಯ, ಉಪಾಧ್ಯಕ್ಷ ಪ್ರೊ. ಕುಮಾರಸ್ವಾಮಿ, ಖಜಾಂಚಿ ಎಚ್.ಎಂ.ಪುಟ್ಟಮಾದಯ್ಯ, ನಿರ್ದೇಶಕ ವರದರಾಜು, ಸಂಶೋಧಕರ ವೇದಿಕೆಯ ಅಧ್ಯಕ್ಷ ರಾಜೇಶ್ ಚಾಕನಹಳ್ಳಿ, ರೈತ ಸಂಘದ ರಾಜ್ಯ ನಾಯಕಿ ಸುನಂದಾ ಜುಂರಾಮ್, ಸಂಶೋಧಕರ ವೇದಿಕೆಯ ಕಾರ್ಯದರ್ಶಿ ಕಲ್ಲಹಳ್ಳಿ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net