

ಬಸವಕಲ್ಯಾಣ: ಮನಸ್ಸಿನ ಮೇಲೆ ಪರಿಣಾಮ ಬೀರುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ನಾಟಕಗಳಿಗಿದೆ ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆ ನಿಮಿತ್ತ ಮಂಗಳವಾರ ಸಂಜೆ ಆಯೋಜಿಸಿದ್ದ ತಾಯಿಯ ಕರುಳು ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಜಗತ್ತಿನ ಅದ್ಭುತ ಶಕ್ತಿ ತಾಯಿ. ತಾಯಿಗಿಂತ ದೊಡ್ಡ ದೇವರಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ, ವಯಸ್ಸಾದ ತಾಯಿ ತಂದೆಯನ್ನು ಗೌರವಿಸುವ ಮನೋಭಾವ ಎಲ್ಲರಲ್ಲಿ ಬೆಳೆಯಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಪೌರಾಯುಕ್ತ ರಾಜು ಡಿ.ಬಣಕಾರ ಮಾತನಾಡಿ, ತಾಯಿ ಪ್ರಪಂಚದಲ್ಲಿ ಎಲ್ಲಕ್ಕಿಂತಲೂ ದೊಡ್ಡವಳು. ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಪ್ರತಿ ಹಂತದಲ್ಲೂ ಮಗುವಿನ ಏಳಿಗೆ ಬಯಸುವ ತಾಯಿ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಮನಸ್ಸು ಪರಿಶುದ್ಧಗೊಳಿಸಲು ಇಂಥ ವೇದಿಕೆಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಮಾತನಾಡಿ, ಮಹಿಳೆ ತ್ಯಾಗಮಯಿ. ಅವಳಿಗೆ ಪ್ರೋತ್ಸಾಹ ನೀಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂದರು.
ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ತಾಯಿ ಎಂಬ ಎರಡಕ್ಷರದಲ್ಲಿ ಅದ್ಭುತ ಶಕ್ತಿಯಿದೆ. ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. ಎಲ್ಲರೂ ಗುರು-ಹಿರಿಯರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.
ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಸಂಯೋಜಕ ರಾಜಕುಮಾರ ಹೆಬ್ಬಾಳೆ ಮಾತನಾಡಿದರು. ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ನಿರ್ದೇಶಕ ಕಾಶಪ್ಪ ಸಕ್ಕರಬಾವಿ, ಕಜಾಪ ಜಿಲ್ಲಾಧ್ಯಕ್ಷ ಎಸ್.ಬಿ. ಕುಚಬಾಳ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಭಕ್ತರಾಜ ಚಿತ್ತಾಪುರೆ, ಪ್ರಮುಖರಾದ ಮನೋಹರ ಮೈಸೆ, ಅರ್ಜುನ ಕನಕ, ಸಂಜುಕುಮಾರ ಜಾಧವ್, ಬಸವರಾಜ ಗಾರಂಪಳ್ಳಿ, ಜಗದೀಶ ನೆಲವಾಡಕರ್, ಪ್ರಕಾಶ ಕನ್ನಾಳೆ ಉಪಸ್ಥಿತರಿದ್ದರು. ಸಂತೋಷ ಮಡಿವಾಳ ಸ್ವಾಗತಿಸಿದರು. ಶ್ರುತಿ ನಿರೂಪಣೆ ಮಾಡಿದರು. ಜ್ಯೋತಿ ಸಂಜಕುಮಾರ ಭಕ್ತಿ ದಾಸೋಹ ಮಾಡಿದರು.
ಬಸವರಾಜ ಕಟ್ಟಿಮನಿ ನಿರ್ದೇಶನದಲ್ಲಿ ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ಕೊಡೇಕಲ್ ನಡೆಸಿಕೊಟ್ಟ ತಾಯಿಯ ಕರುಳು ನಾಟಕ ತಾಯಿಯ ತ್ಯಾಗಮಯ ಜೀವನದ ಕಥೆ ಪ್ರಸಂಗಗಳನ್ನು ಮನತಟ್ಟುವಂತೆ ಮಾಡಿತು.