

ಬಸವಕಲ್ಯಾಣ: ಹನ್ನೆರಡನೆಯ ಶತಮಾನದ ಶರಣರ ಆಂದೋಲನದ ಮುಖ್ಯ ಉದ್ದೇಶವೇ ವ್ಯಕ್ತಿಗತ ಪರಿವರ್ತನೆ. ವ್ಯಕ್ತಿ ಪರಿವರ್ತನೆಗೊಂಡಲ್ಲಿ ಸಮುದಾಯ ಪರಿವರ್ತನೆ ಆಗುತ್ತದೆ. ವ್ಯಕ್ತಿಗತ ಪರಿವರ್ತನೆಗೆ ಶ್ರೀ ಶಿವಯೋಗಿ ಸಿದ್ಧರಾಮರೇ ಉಜ್ವಲ ನಿದರ್ಶನ ಎಂದು ನಾಡಿನ ಹಿರಿಯ ಸಾಹಿತಿ ಡಾ.ಗೊ.ರು. ಚನ್ನಬಸಪ್ಪ ಹೇಳಿದರು.
ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದಿಂದ ಇಲ್ಲಿನ ಅನುಭವ ಮಂಟಪ ಪರಿಸರದಲ್ಲಿ ಆಯೋಜಿಸಿದ್ದ ಎರಡು ದಿನದ ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿದ ಅವರು, ಅರ್ಥಹೀನ ಪದ್ಧತಿ ಮತ್ತು ಆಚರಣೆಯೇ ಧರ್ಮ ಎಂದು ಸಿದ್ಧರಾಮರು ನಂಬಿದ್ದರು. ಆದರೆ ಅಲ್ಲಮಪ್ರಭುಗಳ ದರ್ಶನದ ಬಳಿಕ ಶರಣ ಸಿದ್ಧಾಂತದ ಗುರು-ಲಿಂಗ, ಜಂಗಮದ ಅರಿವು, ಕಾಯಕ-ದಾಸೋಹ, ಅನುಭಾವಗಳು ಅರ್ಥವಾಗಿ ಸಂಪೂರ್ಣ ಬದಲಾದರು ಎಂದು ವಿಶ್ಲೇಷಿಸಿದರು.
ಶಿವಯೋಗಿ ಸಿದ್ಧರಾಮರ ಕುರಿತು ಕಳೆದೊಂದು ಶತಮಾನದಲ್ಲಿ ಸಾಕಷ್ಟು ಚಿಂತನೆ ನಡೆದಿದ್ದು, ಸಾಹಿತ್ಯ ಪ್ರಕಟವಾಗಿದೆ. ಆದರೂ ಅವರ ಜೀವನ ಚರಿತ್ರೆ ಮತ್ತು ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವೆಡೆ ಕೆಲ ತಪ್ಪು ಕಲ್ಪನೆ, ಸಂಶಯಗಳಿರುವುದನ್ನು ಗಮನಿಸಿಯೇ ಸಿದ್ಧರಾಮರ ನಿಜ ವ್ಯಕ್ತಿತ್ವವನ್ನು ಅಧಿಕೃತವಾಗಿ ದಾಖಲಿಸಬೇಕು ಎಂಬುದೇ ರಾಷ್ಟ್ರೀಯ ವಿಚಾರ ಸಂಕಿರಣ ಹಿರಿದಾಸೆ ಎಂದರು.
೧೨ನೇ ಶತಮಾನದ ಶರಣರ ವಿಚಾರಧಾರೆಗಳನ್ನು ಇಂದಿನ ಜನಸಮುದಾಯಕ್ಕೆ ಮುಟ್ಟಿಸುವ ಕಾರ್ಯ ಇಲ್ಲಿನ ಅನುಭವ ಮಂಟಪ ಮಾಡುತ್ತಿದೆ. ಕೆಲ ದಶಕಗಳಿಂದ ಅನುಭವ ಮಂಟಪದಿಂದ ಶರಣರು ಮತ್ತು ಅವರ ವಚನಗಳನ್ನು ಕುರಿತಂತೆ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಚರ್ಚೆ, ಚಿಂತನೆಗಳು ನಡೆಯುತ್ತಿವೆ ಎಂದು ಹೇಳಿದರು.
ಇಲ್ಲಿ ನಡೆಯುವ ಚಿಂತನೆ, ವಚನ ಚಳವಳಿ ವಿಶ್ವಕ್ಕೆ ನೀಡಿದ ಅನನ್ಯ ಕೊಡುಗೆಗೆ ಸಂಬಂಧಿಸಿದ್ದು ಪ್ರಧಾನವಾಗಿ ಶಿವಯೋಗಿ ಸಿದ್ಧರಾಮನ ವ್ಯೋಮ ವ್ಯಕ್ತಿತ್ವದ ದರ್ಶನಕ್ಕೆ ಸಂಬಂಧಿಸಿದ್ದು ಎಂದ ಅವರು, ಶರಣ ಚಳವಳಿ ಆದ್ಯ ಗಮನಕೊಟ್ಟಿದ್ದು ವ್ಯಕ್ತಿಗತ ಪರಿವರ್ತನೆಗೆ. ಅಂತಲೇ ಅನುಭಾವದ ಅಂತ ಸತ್ವ ಮತ್ತು ಇಹದ ಬದುಕಿಗೆ ಸಾರ್ಥಕತೆಗೆ ಪರಿಣಾಮಕಾರಿಯಾದ ಜೀವನ ಸೂತ್ರಗಳನ್ನು ರೂಪಿಸಿದ ಶರಣರು ಅದನ್ನು ಸ್ವಹತ ಅನುಷ್ಠಾನಗೊಳಿಸಿ ತೋರಿಸಿದವರು ಎಂದರು.
ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ ಗ್ರಂಥ ಬಿಡುಗಡೆಗೊಳಿಸಿದ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ಸಿದ್ಧರಾಮರು ಬರೆದ ವಚನಗಳಲ್ಲಿ ತ್ರಿಪದಿ, ಶೂನ್ಯ ಸಂಪಾದನೆ ಗಮನಿಸಿದರೆ ಮೊದಲು ಶೈವವಾಗಿದ್ದ ಸಿದ್ಧರಾಮರು ನಂತರದಲ್ಲಿ ವೀರಶೈವವಾಗಿದ್ದು, ಸಿದ್ಧರಾಮರು ಲಿಂಗಾಯತ ಧರ್ಮ ಪ್ರಸಾರ ಕಾರ್ಯದಲ್ಲಿ ಪ್ರಮುಖ ಸ್ಥಾನದಲ್ಲಿ ನಿಂತು ದಯೆ, ಸ್ವಾತಂತ್ರ್ಯ, ಸಾಮಾಜಿಕ ಕಾರ್ಯಗಳ ತತ್ವದ ತಳಹದಿಯಲ್ಲಿ ಹೊಸದೊಂದು ಸಮಾಜ ಕಟ್ಟಲು ಶ್ರಮಿಸಿದರು. ಶರಣ ಸಮುದಾಯದಲ್ಲಿ ಎದ್ದು ಕಾಣುವ ವ್ಯಕ್ತಿ ತನ್ನ ಶ್ರಮ, ಚಿಂತನೆ ಮತ್ತು ಸಂಘಟನಾ ಶಕ್ತಿಯಿಂದ ಬದುಕಿರುವಾಗಲೇ ದಂತಕಥೆಯಾದರು ಎಂದು ತಿಳಿಸಿದರು.
ವಿಶ್ವಬಸವ ಧರ್ಮ ಟ್ರಸ್ಟ್ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಬಸವ ಬೆಳವಿಯ ಶ್ರೀ ಶರಣಬಸವ ಸ್ವಾಮೀಜಿ, ಸೊಲ್ಲಾಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಧರ್ಮರಾಜ ಕಾಡಾದಿ ಮಾತನಾಡಿದರು. ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಎಸ್‌ಎಸ್‌ಕೆಬಿ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಎವಲೆ, ವಿಶ್ವ ಬಸವಧರ್ಮ ಟ್ರಸ್ಟ್ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ, ಕಾರ್ಯದರ್ಶಿ ಡಾ.ಎಸ್.ಬಿ. ದುರ್ಗೆ, ಸದಸ್ಯ ಕುಪೇಂದ್ರ ಪಾಟೀಲ್, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ ಇತರರಿದ್ದರು.
ಡಾ.ಕಲ್ಯಾಣರಾವ ಜಿ.ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಲಕ್ಷ್ಮೀಕಾಂತ ಪಾಂಚಾಳ ನಿರೂಪಣೆ ಮಾಡಿದರು. ರಾಜು ಜುಬರೆ ವಂದಿಸಿದರು.
ಶರಣ ಸಾಹಿತ್ಯ ಶ್ರೀಮಂತಗೊಳಿಸಿದ ದಾರ್ಶನಿಕ: ವಚನಗಳನ್ನು ರಚಿಸುವ ಮೂಲಕ ಶರಣ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ಶಿವಯೋಗಿ ಸಿದ್ಧರಾಮ. ಕಲ್ಯಾಣ ಕ್ರಾಂತಿ ನಂತರ ವಚನ ಸಾಹಿತ್ಯ ಸಂರಕ್ಷಿಸುವಲ್ಲೂ ಅವರ ಕೊಡುಗೆ ಅಪಾರ ಎಂದು ವಿಶ್ವ ಬಸವಧರ್ಮ ಟ್ರಸ್ಟ್ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ವಿಚಾರ ಸಂಕಿರಣದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಶಿವಯೋಗಿ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಆಗಮಿಸಿದ ನಂತರ ಅನುಭವ ಮಂಟಪದಲ್ಲಿ ಅವರ ಇಷ್ಟಲಿಂಗ ದೀಕ್ಷೆ ವಿಷಯ ಚರ್ಚೆಗೆ ಬರುತ್ತದೆ. ಶರಣರ ನಡುವೆ ನಡೆದ ಸುದೀರ್ಘ ಚರ್ಚೆ ನಂತರ ಕೊನೆಗೆ ಸಿದ್ದರಾಮೇಶ್ವರರು ಚನ್ನಬಸವಣ್ಣ ಅವರಿಂದ ಲಿಂಗ ದೀಕ್ಷೆ ಪಡೆದು ಲಿಂಗವಂತರಾಗುತ್ತಾರೆ. ಇದು ಅಂದಿನ ಧಾರ್ಮಿಕ ಇತಿಹಾಸದಲ್ಲೇ ದೊಡ್ಡ ಪ್ರಸಂಗ ಎಂದರು. ಧಾರ್ಮಿಕ ಪರಂಪರೆಯಿಂದ ಬೆಳೆದಿದ್ದ ಸಿದ್ಧರಾಮರು ಬಸವ ಪರಂಪರೆಗೆ ಪರಿವರ್ತನೆ ಆಗಿದ್ದು ಐತಿಹಾಸಿಕ. ಅನೇಕ ವಚನ, ಬಸವಸ್ತೋತ್ರ, ಅಷ್ಟಾವರಣ ಸ್ತೋತ್ರಗಳನ್ನು ಬರೆಯುವ ಮೂಲಕ ಕನ್ನಡ ಶರಣ ಸಾಹಿತ್ಯವನ್ನು ಸಿದ್ಧರಾಮರು ಶ್ರೀಮಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು. ಶಿವಯೋಗಿ ಸಿದ್ಧರಾಮರ ಬಹುಮುಖ ಪ್ರತಿಭೆ ಪರಿಚಯಿಸುವ ಉದ್ದೇಶದಿಂದ ವಿಚಾರ ಸಂಕಿರಣ ಆಯೋಜಿಲಾಗಿದೆ. ಎರಡು ದಿನಗಳಲ್ಲಿ ೨೪ ವಿಷಯಗಳ ಕುರಿತು ೨೪ ವಿದ್ವಾಂಸರು ಉಪನ್ಯಾಸ ಮಂಡಿಸಲಿದ್ದಾರೆ. ಸಿದ್ಧರಾಮರ ಕುರಿತ ಜೀವನ, ಸಾಹಿತ್ಯ ಅಧ್ಯಯನ ಮಾಡಿರುವ ವಿದ್ವಾಂಸರಿಂದ ಲೇಖನಗಳನ್ನು ಬರೆಸಿ ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ ಹೆಸರಿನಲ್ಲಿ ಕೃತಿ ಹೊರತರಲಾಗಿದೆ. ಕನ್ನಡದ ಈ ಪುಸ್ತವನ್ನು ಮರಾಠಿಗೆ ಅನುವಾದಿಸಲಾಗುವುದು ಎಂದರು.
ವಚನ ಸಾಹಿತ್ಯಕ್ಕೆ ದೊಡ್ಡ ಕೊಡುಗೆ: ಶಿವಯೋಗಿ ಸಿದ್ಧರಾಮರು ವಚನ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಸವ ಬೆಳವಿಯ ಶ್ರೀ ಶರಣಬಸವ ಸ್ವಾಮೀಜಿ ಹೇಳಿದರು. ವಚನ ಸಾಹಿತ್ಯ ಜತೆಗೆ ಸಿದ್ಧರಾಮರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಲ್ಲದೆ ೮೫೦ಕ್ಕೂ ಹೆಚ್ಚು ಸಾಮೂಹಿಕ ವಿವಾಹ ಹಾಗೂ ೩೦ಕ್ಕೂ ಹೆಚ್ಚು ದೇವಾಲಯ, ೧೪೦ಕ್ಕೂ ಅಧಿಕ ಕೆರೆಗಳನ್ನು ನಿರ್ಮಿಸಿದ್ದರು ಎಂದರು. ಸೊಲ್ಲಾಪುರ ದೇವಸ್ಥಾನದಲ್ಲಿ ಏನಾದರೂ ಕಾರ್ಯಕ್ರಮ ಮಾಡಬೇಕಾದರೆ ಬಸವಕಲ್ಯಾಣದ ಅನುಭವ ಮಂಟಪ ಸಿದ್ಧರಾಮರ ಪರಿಚಯಿಸುವ ಕಾರ್ಯಕ್ರಮ ಮಾಡಬೇಕೇ ಹೊರತು, ಶೈವ ಪದ್ಧತಿಯಲ್ಲಿ ಬಿಂಬಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.
ಶ್ರೀ ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ ವಿಚಾರ ಸಂಕಿರಣ ಮತ್ತು ಸಂಸ್ಮರಣ ಸಂಪುಟದ ಶಕ್ತಿ ಮತ್ತು ದಿಕ್ಸೂಚಿಯೇ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಶ್ರೀ ಗುರುಬಸವ ಪಟ್ಟದ್ದೇವರು. ಸಿದ್ಧರಾಮರ ಬಗ್ಗೆ ಕೆಲವರಲ್ಲಿ ಇರುವ ತಪ್ಪು ಕಲ್ಪನೆ, ಸಂಹೇಹಗಳನ್ನು ದೂರ ಮಾಡುವುದೇ ಈ ವಿಚಾರ ಸಂಕಿರಣದ ಮೂಲ ಆಶಯ.
| ಡಾ.ಕಲ್ಯಾಣರಾವ ಜಿ.ಪಾಟೀಲ್ ಸಂಪಾದಕ, ರಾಷ್ಟ್ರೀಯ ವಿಚಾರ ಸಂಕಿರಣದ ಸಂಸ್ಮರಣ ಸಂಪುಟ
ಸೊಲ್ಲಾಪುರದಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯವನ್ನು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪದಲ್ಲಿ ಮಾಡಿದ್ದಾರೆ. ಸಿದ್ಧರಾಮರ ಚರಿತ್ರೆ ಕುರಿತು ಸಮಗ್ರ ಸಾಹಿತ್ಯ ಹೊರಬರಲಿ ಎಂಬ ಆಶಯ ನಮ್ಮದು. ಈ ವಿಚಾರ ಸಂಕಿರಣದಲ್ಲಿ ಬಿಡುಗಡೆಗೊಂಡ ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ ಗ್ರಂಥವನ್ನು ಮರಾಠಿ ಭಾಷೆಗೆ ಅನುವಾದಿಸಿ ಲೋಕಾರ್ಪಣೆ ಮಾಡಲಾಗುವುದು.
| ಧರ್ಮರಾಜ ಕಾಡಾದಿ ಅಧ್ಯಕ್ಷ, ಶ್ರೀ ಸಿದ್ಧೇಶ್ವರ ದೇವಸ್ಥಾನ ಪಂಚ ಕಮಿಟಿ ಸೊಲ್ಲಾಪುರ
ಪೂಜ್ಯರ ಜೀವನ ಚರಿತ್ರೆ ಮೇಲೆ ಗೋಷ್ಠಿಗಳ ಬೆಳಕು: ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಚರಿತ್ರೆ ಮತ್ತು ಪರಿಸರ ವಿಷಯದ ಮೇಲೆ ಗೋಷ್ಠಿ-೧ ಜರುಗಿತು. ಶ್ರೀ ಬಸವಾನಂದ ಸ್ವಾಮೀಜಿ ಸಾನ್ನಿಧ್ಯ, ಬೆಳಗಾವಿಯ ಡಾ.ವಿ.ಎಸ್. ಮಾಳಿ ಅಧ್ಯಕ್ಷತೆ ವಹಿಸಿದ್ದರು. ಸಿದ್ಧರಾಮರು ಬೆಳೆದು ಬಂದ ಕುರಿತು ಕಲಬುರಗಿಯ ಪ್ರೊ.ಇಂದುಮತಿ ಪಾಟೀಲ್ ಮತ್ತು ಶಿವಯೋಗಿ ಸಿದ್ಧರಾಮರ ಸಾಮಾಜಿಕ ಧಾರ್ಮಿಕ ಹಿನ್ನೆಲೆ ಕುರಿತು ಪ್ರೊ.ಶಿವಗಂಗಾ ರುಮ್ಮಾ ಹಾಗೂ ಪ್ರೊ.ಗುರುಲಿಂಗಪ್ಪ ಧಬಾಲೆ ಉಪನ್ಯಾಸ ನೀಡಿದರು. ಮೀನಾಕ್ಷಿ ಬಿರಾದಾರ್, ಡಾ.ಸಂಗೀತಾ ಮಂಠಾಳೆ ಇತರರಿದ್ದರು. ಡಾ.ಸುಮಂಗಲಾ ರಡ್ಡಿ ನಿರೂಪಣೆ ಮಾಡಿದರು. ಡಾ.ಸಾರಿಕಾದೇವಿ ಎಲ್.ಕಾಳಗಿ ವಂದಿಸಿದರು. ನಂತರ ಸಿದ್ಧರಾಮರ ಕುರಿತು ಕನ್ನಡ ಸಾಹಿತ್ಯದ ವಿಷಯ ಕುರಿತ ಗೋಷ್ಠಿ-೨ರಲ್ಲಿ ನಿಲಂಗಾದ ಪೂಜ್ಯ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ, ಪ್ರೊ.ಕೆ. ರವೀಂದ್ರನಾಥ ಅಧ್ಯಕ್ಷತೆ ವಹಿಸಿದ್ದರು. ಡಾ.ರಣಧೀರ ಬೇಲೂರ, ಡಾ.ಶಿವರಾಜ ಶಾಸಿ ಹೇರೂರ, ಡಾ.ಶೈಲಜಾ ಎನ್.ಬಾಗೇವಾಡಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ವಿಶ್ವನಾಥಪ್ಪ ಬಿರಾದಾರ್, ಸಿದ್ದಯ್ಯ ಕಾವಡಿಮಠ ಇದ್ದರು. ಡಾ.ಚಿದಾನಂದ ಚಿಕ್ಕಮಠ ಸ್ವಾಗತಿಸಿ ನಿರೂಪಣೆ ಮಾಡಿದರು. ರವಿ ಕೊಳಕೂರ ವಂದಿಸಿದರು.