ಭಕ್ತನ ಮನದಲ್ಲಿ ಅಹಂಭಾವದ ಸುಳಿಯದಿರಲಿ

20BK5
ಹಾರಕೂಡ ಶ್ರೀಮಠದಲ್ಲಿ ಶ್ರಾವಣ ಮಾಸದ ಮಧ್ಯ ಸೋಮವಾರ ನಿಮಿತ್ತ ಏರ್ಪಡಿಸಿದ್ದ ಧರ್ಮಸಭೆಯನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಮಲ್ಲಿನಾಥ ಹಿರೇಮಠ, ಸಿದ್ರಾಮಪ್ಪ ಗುದಗೆ, ಜಿ.ಎಸ್.ಮಾಲಿಪಾಟೀಲ್, ಮಾದೇವ ಪೂಜಾರಿ, ಪಂಡಿತರಾವ ದೇಗಾಂವ, ಚೆನ್ನಪ್ಪ ದಾಮಾ, ಅಪ್ಪಣ್ಣ ಜನವಾಡ ಇತರರಿದ್ದರು.
Published on

ಬಸವಕಲ್ಯಾಣ: ದೇವರಿರುವಲ್ಲಿ ಭಕ್ತನಿರುವಿಕೆ ಕಾಣಬಹುದು. ಭಕ್ತನಿದ್ದಲ್ಲಿ ದೇವರು ಖಂಡಿತ ನೆಲೆ ನಿಂತಿರುತ್ತಾನೆ. ಆದರೆ ಭಕ್ತನ ಮನದಲ್ಲಿ ಯಾವತ್ತೂ ಅಹಂಭಾವ ಸುಳಿದಾಡಲೇಬಾರದು. ಭಕ್ತಿ ಬದುಕಿನ ಭೂಮಿಗೆಯಾಗಿದ್ದು, ಭಕ್ತಿಯ ಬೃಂದಾವನದಲ್ಲಿ ಅಹಂಭಾವದ ಮೊಳಕೆಯೊಡೆಯದಂತೆ ಸದಾ ಜಾಗೃತರಾಗಿರಬೇಕು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ಶ್ರಾವಣ ಮಾಸದ ಮಧ್ಯ ಸೋಮವಾರ ಲಿಂ.ಚನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಉತ್ಸವದ ನಿಮಿತ್ತ ಏರ್ಪಡಿಸಿದ್ದ ಧರ್ಮಸಭೆ, ಭಜನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಈ ಜಗತ್ತು ದೇವನ ಪ್ರಯೋಗಶಾಲೆ. ಇಲ್ಲಿ ನಾವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಯೋಗಕ್ಕೆ ಒಳಪಡುತ್ತೇವೆ ಎಂಬ ನಿತ್ಯ ಸತ್ಯ ಅರಿತು ಬದುಕು ಸುಂದರಗೊಳಿಸಿಕೊಳ್ಳಬೇಕು. ಲಿಂ.ಚನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ಸದೃಢ ಹಾಗೂ ಸಾಮರಸ್ಯ ಸಮಾಜದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡಲಿ ಎಂದು ಶುಭ ಹಾರೈಸಿದರು.

ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಗ್ರಾಪಂ ಮಾಜಿ ಅಧ್ಯಕ್ಷ ಮಾದೇವ ಪೂಜಾರಿ, ಜಿ. ಎಸ್. ಮಾಲಿಪಾಟೀಲ್, ಪಂಡಿತರಾವ ದೇಗಾಂವ, ವಿಜಯಕುಮಾರ ಕುಲಕರ್ಣಿ, ಚೆನ್ನಪ್ಪ ದಾಮಾ, ರಾಜಕುಮಾರ ಹಂಜಗೆ, ನಾಗಣ್ಣ ಪೀರಜೆ, ಶಿವಪುತ್ರ ಶೀಲವಂತ ಇತರರಿದ್ದರು.

ವಿಠಲ್ ಹೂಗಾರ ನಿರೂಪಣೆ ಮಾಡಿದರು. ವಿಜಯಕುಮಾರ ಕುಲಕರ್ಣಿ ವಂದಿಸಿದರು. ಶ್ರಾವಣ ಮಾಸದ ಮಧ್ಯ ಸೋಮವಾರ ನಿಮಿತ್ತ ಹಾರಕೂಡದಲ್ಲಿ ಲಿಂ.ಚನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ಜರುಗಿತು.

ಭಜನೆ: ಮಧ್ಯ ಸೋಮವಾರ ನಿಮಿತ್ತ ಜರುಗಿದ ಭಜನಾ ಕಾರ್ಯಕ್ರಮದಲ್ಲಿ ೨೬ಕ್ಕೂ ಅಧಿಕ ಭಜನಾ ಸಂಘದವರು ರಾತ್ರಿವಿಡೀ ಭಜನೆ ಸೇವೆ ಸಲ್ಲಿಸಿ, ಪೂಜ್ಯರಿಂದ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net