ಜೈಘೋಷಗಳ ಮಧ್ಯೆ ಬಸವೇಶ್ವರ ರಥೋತ್ಸವ

13KLB BK2
ಬಸವೇಶ್ವರ ಜಾತ್ರೆ ನಿಮಿತ್ತ ಬಸವಕಲ್ಯಾಣದ ರಥ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಅಪಾರ ಭಕ್ತರ ಜೈಘೋಷಗಳ ಮಧ್ಯೆ ಅದ್ದೂರಿ ರಥೋತ್ಸವ ನೆರವೇರಿತು.
Published on

ಬಸವಕಲ್ಯಾಣ: ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿಯಿಂದ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಮೂರು ದಿನದ ಮಹಾತ್ಮ ಬಸವೇಶ್ವರ ಜಾತ್ರೋತ್ಸವ ಸೋಮವಾರ ಬೆಳಗ್ಗೆ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ಅದ್ದೂರಿ ರಥೋತ್ಸವದೊಂದಿಗೆ ಸಮಾರೋಪಗೊಂಡಿತು.

ಭಾನುವಾರ ರಾತ್ರಿ ಶುರುವಾದ ಸಾಂಸ್ಕೃತಿಕ ವೈಭವದ ಪಲ್ಲಕ್ಕಿ ಮತ್ತು ನಂದಿ ಧ್ವಜಗಳ ಮೆರವಣಿಗೆ ಸೋಮವಾರ ಬೆಳಗ್ಗೆ ರಥ ಮೈದಾನಕ್ಕೆ ಬಂದಾಗ ಜನಸಾಗರ ಸೇರಿತ್ತು. ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಜೈಘೋಷಗಳು ಮೊಳಗಿದವು. ಇದೇ ವೇಳೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪಶು ಪ್ರದರ್ಶನದಲ್ಲಿ ಭಾಗವಹಿಸಿದ್ದ ಅತ್ಯುತ್ತಮ ತಳಿಗಳ ಮಾಲೀಕರಿಗೆ (ರೈತರು) ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ ಅಧ್ಯಕ್ಷತೆ ವಹಿಸಿದ್ದರು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ವಿಶ್ವಸ್ಥರಾದ ಗದಗೆಪ್ಪ ಹಲಶೆಟ್ಟೆ, ಸೋಮಶೇಖರಯ್ಯ ವಸ್ತ್ರದ, ಮಲ್ಲಿನಾಥ ಮಂಠಾಳೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಮಲ್ಲಯ್ಯ ಹಿರೇಮಠ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಬಾವೆ, ಜಗನ್ನಾಥ ಖೂಬಾ, ಭದ್ರಿನಾಥ ಪಾಟೀಲ್, ಅನೀಲಕುಮಾರ ರಗಟೆ, ರೇವಣಪ್ಪ ರಾಯವಾಡೆ, ಶಿವಶರಣ ನೂಲಿ ಚಂದಯ್ಯ ಸಮಾಜದ ಅಧ್ಯಕ್ಷ ಧರ್ಮಣ್ಣ ಭೆಂಡೆ ಇತರರಿದ್ದರು. ಡಾ.ಭೀಮಾಶಂಕರ ಬಿರಾದಾರ, ಡಾ.ರುದ್ರಮಣಿ ಮಠಪತಿ ಹಾಗೂ ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು.

ರಥೋತ್ಸವ ವೇಳೆ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮವೂ ಜರುಗಿತು. ಮುನ್ನೆಚ್ಚರಿಕೆಯಾಗಿ ರಥ ಮೈದಾನ ಮತ್ತು ಮೆರವಣಿಗೆ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐ ಅಲಿಸಾಬ್, ಪಿಎಸ್‌ಐ ಅಂಬರೀಶ್ ವಾಘ್ಮೋಡೆ, ಸಂಚಾರ ಪಿಎಸ್‌ಐ ಸುವರ್ಣಾ ಮಾಲಶೆಟ್ಟಿ, ಕ್ರೈಂ ಪಿಎಸ್‌ಐ ಸಿದ್ರಾಮ, ಹುಲಸೂರು ಕ್ರೈಂ ಪಿಎಸ್‌ಐ ಕೃಷ್ಣಕುಮಾರ ಸುಬೇದಾರ ಅವರನ್ನು ಸನ್ಮಾನಿಸಲಾಯಿತು.

ಮೆರವಣಿಗೆ ವೈಭವ: ಭಾನುವಾರ ರಾತ್ರಿ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ರಥ ಮೈದಾನವರೆಗೆ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿದ್ದ ಹೆಡೆ ಇರುವ ನಂದಿ ಸೇರಿ ಐದು ಧ್ವಜ ಮತ್ತು ಪಲ್ಲಕ್ಕಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ಜರುಗಿತು. ವಿಶೇಷ ಸಮವಸ್ತ್ರ ಧರಿಸಿದ ಬಸವ ಭಕ್ತರು ನಂದಿ ಧ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. ಮೆರವಣಿಗೆ ಎದುರು ಅಲಂಕೃತ ವಾಹನದಲ್ಲಿ ಶಿವಶರಣ ನೂಲಿ ಚಂದಯ್ಯ ಮೂರ್ತಿ ಮತ್ತು ಪಲ್ಲಕ್ಕಿ ಇಡಲಾಗಿತ್ತು. ಕೋಟೆ ಬಳಿ ನಂದಿ ಧ್ವಜ ಹಾಗೂ ಪಲ್ಲಕ್ಕಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಇತರರಿದ್ದರು. ಮಾರ್ಗದುದ್ದಕ್ಕೂ ಮನೆ, ಅಂಗಡಿಗಳ ಮುಂದೆ ನಿಂತ ಮಹಿಳೆಯರು ಪಲ್ಲಕ್ಕಿಗೆ ಆರತಿ ಬೆಳಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net