

ಬಸವಕಲ್ಯಾಣ: ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಜನಪರ ಯೋಜನೆಗಳನ್ನು ಜಾರಿಗೆ ತಂದು, ನಾಡಿನ ಪ್ರಗತಿಗೆ ಮತ್ತು ಸಮಾಜದಲ್ಲಿ ಪರಿವರ್ತನೆಗೆ ಮುನ್ನುಡಿ ಬರೆದ ಡಿ. ದೇವರಾಜ ಅರಸು ನಾಡು ಕಂಡ ಶ್ರೇಷ್ಠ ಮುತ್ಸದಿ ಎಂದು ಗ್ರೇಡ್-೨ ತಹಸೀಲ್ದಾರ್ ಡಾ.ರಮೇಶಬಾಬು ಹಾಲು ಹೇಳಿದರು.
ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಜಿಪಂ, ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಡಿ ಮಂಗಳವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ ೧೦೯ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಅವರು ಜಾರಿಗೆ ತಂದ ಯೋಜನೆ, ನಾಡಿಗೆ ನೀಡಿದ ಕೊಡುಗೆ ಶಾಶ್ವತ, ಸ್ಮರಣೀಯ ಎಂದರು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ನಾರಾಯಣಪುರ ವಿಶೇಷ ಉಪನ್ಯಾಸ ನೀಡಿ, ವಸತಿ ನಿಲಯ, ಭೂ ಸುಧಾರಣೆ ಕಾಯ್ದೆ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತರುರುವ ಸಮಾಜದಲ್ಲಿ ಪರಿವರ್ತನೆ ಮತ್ತು ಸುಧಾರಣೆಗೆ ದಿಟ್ಟ ಹೆಜ್ಜೆ ಇಟ್ಟ ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ನಾಡಿನ ಪ್ರಗತಿಗೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.
ನಗರ ಸಭೆ ಪೌರಾಯುಕ್ತ ರಾಜು.ಡಿ ಬಣಕಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ, ಸಿಪಿಐ ಅಲಿಸಾಬ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾರ್ಥಂಡ ಮಚಕುರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ, ತಾಪಂ ತಾಲೂಕು ಯೋಜನಾಧಿಕಾರಿ ರಾಜಶೇಖರ ನೆಲ್ಲಿ, ಪರಿಶಿಷ್ಟ ಪಂಗಡದ ತಾಲೂಕು ಅಧಿಕಾರಿ ಶಿವಕುಮಾರ, ಅನೀಲಕುಮಾರ ಚಾಂದೆ ಇದ್ದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿ.ಬಿ.ಹಿರೇಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಜಡಗೆ ನಿರೂಪಣೆ ಮಾಡಿ ವಂದಿಸಿದರು. ವಸತಿ ನಿಲಯದಲ್ಲಿ ಅಭ್ಯಾಸ ಮಾಡಿ ಅಗ್ರಶ್ರೇಣಿಯಲ್ಲಿ ಪಾಸಾದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.