

ಬಸವಕಲ್ಯಾಣ: ಸಮಯ ಜತೆ ಸೌಲಭ್ಯಗಳನ್ನು ಸಮರ್ಪಕ ಬಳಸಿಕೊಂಡು ಶ್ರಮವಹಿಸಿ ಅಭ್ಯಸಿಸುವಂತೆ ಬಿಇಟಿ ಉಪಾಧ್ಯಕ್ಷರಾದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಿಇಟಿಯ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಇ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿದ ಅವರು, ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು. ಕ್ಲಾಸ್ ತಪ್ಪಿಸದೆ ಬೋಧನೆ ವೇಳೆ ಏಕಾಗ್ರತೆಯಿಂದ ಕೇಳಬೇಕು. ತಿಳಿಯದಿರುವುದನ್ನು ಕೇಳಿ ಅರ್ಥ ಮಾಡಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಜೀವನದಲ್ಲಿ ಮುನ್ನುಗ್ಗುವ ಅಗತ್ಯವಿದೆ. ಭವಿಷ್ಯಕ್ಕಾಗಿ ಗಂಭೀರ ಚಿಂತನೆ ಅವಶ್ಯಕ. ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಪೂರಕ ಪ್ರಯತ್ನ ಮಾಡಿದಾಗಲೇ ಯಶಸ್ವಿ ಆಗಬಹುದು ಎಂದು ಹೇಳಿದರು.
ಬಿಇಟಿಯ ವಿವಿಧ ಕಾಲೇಜು ಪ್ರಾಚಾರ್ಯರಾದ ಡಾ.ನಾಗಯ್ಯಾ ಸ್ವಾಮಿ, ವಿಶ್ವನಾಥಯ್ಯಾ ಸ್ವಾಮಿ, ನೀಲಕಂಠ ಕೋಡ್ಲೆ, ಶಿವಕುಮಾರ ಸ್ವಾಮಿ, ಕುಲಸಚಿವ ಪ್ರೇಮಸಾಗರ ಪಾಟೀಲ್, ಸುವರ್ಣಲತಾ ಹಿರೇಮಠ, ಅಧೀಕ್ಷಕ ವೃಷೀಕೇತ ಭೂಸಾರೆ, ಅಕೌಂಟ್ ಆಫೀಸರ್ ಸುಭಾಷಚಂದ್ರಯ್ಯ ಇದ್ದರು. ಉಪ ಪ್ರಾಚಾರ್ಯ ಡಾ.ಅರುಣಕುಮಾರ ಎಲಾಲ್ ಸ್ವಾಗತಿಸಿದರು. ರೇವಣಸಿದ್ದಪ್ಪ ಡಿಗ್ಗಿಕರ್ ವಂದಿಸಿದರು. ವಿದ್ಯಾಸಾಗರ ನಿರೂಪಣೆ ಮಾಡಿದರು.