ಶಿಕ್ಷಣದಿಂದ ವಿಮರ್ಶಾತ್ಮಕ ಚಿಂತನೆ ಸಾಧ್ಯ

Oplus_131074
Oplus_131074
Published on

ಬಸವಕಲ್ಯಾಣ: ವಿಮರ್ಶೆಯ ಜತೆಗೆ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಅನ್ವೇಷಣೆಗಳು ಉನ್ನತ ಶಿಕ್ಷಣದ ಪ್ರಧಾನ ಧೋರಣೆಯಾಗಿದೆ. ಒಂದು ಸಮಾಜ, ದೇಶವನ್ನು ಕ್ರಿಯಾಶೀಲವಾಗಿಡುವ ಕೆಲಸ ಶಿಕ್ಷಣದಿಂದ ಮಾತ್ರ ನಡೆಯುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ, ಚಿಂತಕ ಸಿದ್ದಪ್ಪ ಮೂಲಗೆ ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣ ಹಾಗೂ ಯುವ ಜನತೆ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಉತ್ಪಾದಿಸುವ, ಸಾಮಾಜಿಕ ಸಮಾನತೆ ತರಬಲ್ಲ, ಮನುಷ್ಯ ಪರವಾಗಿ ಲೋಚಿಸುವ ವಿಚಾರಗಳು ಉನ್ನತ ಶಿಕ್ಷಣದಲ್ಲಿದ್ದರೆ ದೇಶದ ಪ್ರಗತಿ ಸಾಧ್ಯ ಎಂದರು.

ಶಿಕ್ಷಣ ಮತ್ತು ಆರೋಗ್ಯ ಯಾವ ದೇಶದಲ್ಲಿ ಮಾರಾಟವಾಗುತ್ತದೆಯೋ ಆ ದೇಶ ಅವನತಿಯ ಹಾದಿ ಹಿಡಿಯುತ್ತದೆ. ಶಿಕ್ಷಣ ಮಾರಾಟದ ವಸ್ತುವಾದಾಗ ಇಡೀ ದೇಶ ದುರಂತಕ್ಕೆ ದೂಡಿದಂತೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿ ಮಾಡಲಾಗುತ್ತದೆ. ಅತ್ಯಂತ ಬೌದ್ಧಿಕತೆಯನ್ನು ಹೊಂದಿದ ಬಿಎ, ಬಿಕಾಂ ಮತ್ತು ಬಿಎಸ್ಸಿ ಪದವಿಗಳ ಬಗೆಗೆ ತಾತ್ಸಾರ, ಉದಾಸೀನತೆ ಬೇಡ. ಗಂಭೀರವಾಗಿ ಅವುಗಳನ್ನು ಓದಿದರೆ ಎಲ್ಲಕ್ಕಿಂತ ಭಿನ್ನವಾದ, ಸೃಜನಶೀಲ ಬದುಕು ಕಟ್ಟಿಕೊಳ್ಳಬಹುದು. ಸಮಾನತೆಯ ಬಗೆಗೆ ಮೊದಲು ಮಾತನಾಡಿದ್ದು ಬಸವಕಲ್ಯಾಣ. ಮೊದಲು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದು ಅನುಭವ ಮಂಟಪ. ಬಸವಣ್ಣನವರ ಹೆಸರು ಹೊಂದಿದ ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವುದು ಶರಣ ಸಂಸ್ಕೃತಿಯ ಪ್ರತೀಕ ಮತ್ತು ಪ್ರಭಾವ ಎಂದರು.

ಲೋಕವನ್ನು ಅರಿಯಲು, ಗ್ರಹಿಸಲು ದಾರಿಯಾಗಿಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ನಿರ್ಬಂಧಗಳಿವೆ. ನಿಸರ್ಗ, ಸಮಾಜ, ಲೋಕವನ್ನು ಅರಿಯಲು ಸರಿಯಾದ ಶಿಕ್ಷಣದ ಅಗತ್ಯವಿದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಧ್ಯಯನ ಮಾಡುವ ಮೂಲಕ ಹೊಸದನ್ನು ಕಂಡುಕೊಳ್ಳಲು ಸಾಧ್ಯವಿದೆ. ಓದಿನಲ್ಲಿ ತನ್ಮಯತೆ ಅಗತ್ಯ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶಟ್ಟಿ ಮಾತನಾಡಿ, ವಿಶ್ವವಿದ್ಯಾಲಯದ ಆಡಳಿತಾತ್ಮಕ ಸುಧಾರಣೆಗಾಗಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಿಂಡಿಕೇಟ್ ಸದಸ್ಯರನ್ನು ಸರ್ಕಾರ ಆಯ್ಕೆ ಮಾಡುತ್ತದೆ. ಉನ್ನತ ಶಿಕ್ಷಣದಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಸಂಶೋಧನಾತ್ಮಕ ಅಧ್ಯಯನ, ಸೈದ್ಧಾಂತಿಕ ಹಾಗೂ ತಾತ್ವಿಕ ನೆಲೆಯ ಅನುಸಂಧಾನ ಉನ್ನತ ಶಿಕ್ಷಣದ ಗುಣವಾಗಿದೆ. ಅದು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ದಾರಿಯಾಗಿದೆ ಎಂದರು.

ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ ಅಧ್ಯಕ್ಷತೆ ವಹಿಸಿದ್ದರು. ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಐಕ್ಯೂಎಸಿ ಸಂಯೋಜಕ ಪವನ ಪಾಟೀಲ್, ಅಶೋಕ ರೆಡ್ಡಿ ಗದಲೇಗಾಂವ, ವಿವೇಕಾನಂದ ಶಿಂಧೆ, ರೋಶನ್ ಬೀ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ಡಾ.ಬಸವರಾಜ ಖಂಡಾಳೆ, ಪ್ರವೀಣ ಬಿರಾದಾರ, ಶ್ರೀನಿವಾಸ ಉಮಾಪುರೆ, ಪ್ರಶಾಂತ ಬುಡಗೆ, ಬಸವರಾಜ ಗುಂಗೆ ಇತರರಿದ್ದರು.

ಡಾ. ಶಾಂತಲಾ ಪಾಟೀಲ್ ಸ್ವಾಗತಿಸಿದರು. ಜಗದೇವಿ ಜವಳಿಗೆ ನಿರೂಪಣೆ ಮಾಡಿದರು. ಗಂಗಾಧರ ಸಾಲಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net