ಅನುಭವ ಮಂಟಪ ಕಾಮಗಾರಿ ಕಳಪೆ

mallikarjun khuba_01
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ
Published on

ಬಸವಕಲ್ಯಾಣ: ಬಸವಣ್ಣನವರ ಕಾಯಕ ಭೂಮಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿಸುವ ಉದ್ದೇಶದಿಂದ ರಚನೆಯಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ(ಬಿಕೆಡಿಬಿ) ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ. ನೂತನ ಅನುಭವ ಮಂಟಪ ಕಾಮಗಾರಿ ಕಳಪೆಯಾಗಿದೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆರೋಪಿಸಿದ್ದಾರೆ.

ಬಿಕೆಡಿಬಿ ನಾಮ್‌ಕೇವಾಸ್ತೆ ಆಗಿದೆ. ಹಳೇ(ಮೂಲ) ಅನುಭವ ಮಂಟಪ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಹೊಸ ಅನುಭವ ಮಂಟಪ ತಗ್ಗಿನಲ್ಲಿ ನಿರ್ಮಿಸುತ್ತಿದ್ದು, ನಗರದಿಂದ ನೋಡಿದರೆ ಕಾಣುವುದೇ ಇಲ್ಲ. ರಸ್ತೆ ಒಂದ್ಕಡೆ, ಅನುಭವ ಮಂಟಪ ಇನ್ನೊಂದೆಡೆ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಕೆಡಿಬಿಕೆಗೆ ಸದಸ್ಯರ ನೇಮಕ ಮಾಡುವಾಗಲೂ ಸ್ಥಳೀಯರನ್ನು ಕಡೆಗಣಿಸಿದ್ದು, ಈಗ ವಚನ ಸಲಹಾ ಸಮಿತಿಯಲ್ಲೂ ಕಡೆಗಣಿಸಲಾಗಿದೆ. ಶರಣ ಜಯಂತಿ ಕಾರ್ಯಕ್ರಮಗಳಲ್ಲಿ ಬಿಕೆಡಿಬಿ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಆದರೆ ಶಾಸಕ ಶರಣು ಸಲಗರ ಕೇಳದೆ ಸುಮ್ಮನಿದ್ದಾರೆ ಏಕೆ ಎಂದು ಪ್ರಶ್ನಿಸಿದರು.

ಐತಿಹಾಸಿಕ ಪರುಷ ಕಟ್ಟೆ ಅಭಿವೃದ್ಧಿಗೆ ಅನುದಾನ ಬಂದು ವರ್ಷವಾದರೂ ಜೀರ್ಣೋದ್ಧಾರವಾಗಿಲ್ಲ. ಹಿಂದಿನ ಶಾಸಕರು ಏನು ಮಾಡಿದ್ದಾರೆ? ನನ್ನ ಅವಧಿಯಲ್ಲಿ ಮಿನಿ ವಿಧಾನಸೌಧ, ಸಿಎಂಸಿ ಕಟ್ಟಡ, ರಸ್ತೆ ಸೇರಿ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ನಗರದಲ್ಲಿ ಒಳಚರಂಡಿ (ಯುಜಿಡಿ) ನಿರ್ಮಾಣಕ್ಕೆ ಸಲ್ಲಿಸಿದ್ದ ೧೮೬ ಕೋಟಿ ರೂ. ಪ್ರಸ್ತಾವನೆ ಬಗ್ಗೆ ಶಾಸಕರು ಚಕಾರ ಎತ್ತುತ್ತಿಲ್ಲ ಎಂದು ಹರಿಹಾಯ್ದರು.

ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ನಗರ ಘಟಕದ ಆಧ್ಯಕ್ಷ ಡಾ.ಜಿಯಾವುದ್ದೀನ್, ಇಸ್ಮಾಯಿಲ್ ಬೆಳಕೋಣಿ, ಧನರಾಜ ರಾಜೋಳೆ, ಅಬ್ದುಲ್ ರಜಾಕ್, ವೆಂಕಟರಾವ ಪಾಟೀಲ್, ಬಸವರಾಜ ಖೂಬಾ, ರಾಹುಲ್ ಶಿಂಧೆ, ಧನರಾಜ ಶಿಂಧೆ, ನವಾಜ್ ಖುರೇಶಿ ಇದ್ದರು

ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಚುನಾವಣೆ ಸಿದ್ಧತೆಗೆ ಸಂಘಟನೆ ಬಲಪಡಿಸಲಾಗುತ್ತಿದ್ದು, ಬೂತ್ ಮಟ್ಟದಲ್ಲಿ ಹೊಸದಾಗಿ ಸದಸ್ಯತ್ವ ಮಾಡಿಕೊಳ್ಳಲಾಗುವುದು.
| ಮಲ್ಲಿಕಾರ್ಜುನ ಖೂಬಾ ಮಾಜಿ ಶಾಸಕ, ಜೆಡಿಎಸ್ ಹಿರಿಯ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net