ಡಾ.ಎಸ್.ಎಲ್. ಭೈರಪ್ಪಗೆ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ

Oplus_0
ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಗುರುಲಿಂಗ ಶಿವಾಚಾರ್ಯರ ೫೫ನೇ ಸ್ಮರಣೋತ್ಸವ ಹಾಗೂ ೩೮ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪ್ರತಿಷ್ಠಿತ ರಾಜ್ಯಮಟ್ಟದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ-೨೦೨೪ ಅನ್ನು ಹಿರಿಯ ಸಾಹಿತಿ, ಶ್ರೇಷ್ಠ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿ ಗೌರವಿಸಿದರು. ಶಾಸಕ ಶರಣು ಸಲಗರ, ಡಾ.ಎಂ.ಭಾಸ್ಕರ್, ನಾಡೋಜ ಡಾ.ಮನು ಬಳಿಗಾರ, ಡಾ.ಸಂಗಮೇಶ ಸವದತ್ತಿಮಠ, ಡಾ.ರಾಜಶೇಖರ ಜಮದಂಡಿ, ಸಹನಾ ವಿಜಯಕುಮಾರ, ಶಿವರಾಜ ನರಶೆಟ್ಟಿ, ಮಲ್ಲಿನಾಥ ಹಿರೇಮಠ ಇದ್ದರು.
Published on

ಬಸವಕಲ್ಯಾಣ: ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪ್ರತಿಷ್ಠಿತ ರಾಜ್ಯಮಟ್ಟದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ- ೨೦೨೪ ಅನ್ನು ಶ್ರೇಷ್ಠ ಸಾಹಿತಿ, ಚಿಂತಕ, ವಿಮರ್ಶಕ, ಶ್ರೇಷ್ಠ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಶುಕ್ರವಾರ ಸ್ವೀಕರಿಸಿದರು.

ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಏರ್ಪಡಿಸಿದ್ದ ಶ್ರೀ ಗುರುಲಿಂಗ ಶಿವಾಚಾರ್ಯರ ೫೫ನೇ ಪುಣ್ಯ ಸ್ಮರಣೋತ್ಸವ ಹಾಗೂ ೩೮ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಒಂದು ಲಕ್ಷ ನಗದು, ಎರಡು ತೊಲ ಚಿನ್ನದ ಪದಕ ಮತ್ತು ಫಲಕವನ್ನು ಒಳಗೊಂಡಿರುವ ಪ್ರಶಸ್ತಿಯನ್ನು ಡಾ.ಭೈರಪ್ಪ ಅವರಿಗೆ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನೀಡಿ ಗೌರವಿಸಿದರು.

ನನ್ನ ಬರಹ ಜನಮನ್ನಣೆ ಪಡೆಯುವುದರ ಜತೆಗೆ ಅಸಂಖ್ಯ ಓದುಗರಿಗೆ ತೃಪ್ತಿ ನೀಡಿದೆ. ಇದಕ್ಕಿಂತ ಹೆಚ್ಚೇನೂ ಬಯಸುವುದಿಲ್ಲ ಎಂದ ಡಾ.ಭೈರಪ್ಪ ಅವರು, ವಿಶ್ವದ ಎಲ್ಲ ದೇಶಗಳನ್ನು ನೋಡಿದ್ದು ಜ್ಞಾನ ವೃದ್ಧಿಗೆ ಕಾರಣವಾಯಿತು. ನಮ್ಮ ಬರವಣಿಗೆ ಮನೆ, ನಮ್ಮೂರಿಗೆ ಸೀಮಿತವಾಗದೆ ಇಡೀ ದೇಶಕ್ಕೆ ನಮ್ಮದು ಎಂದನಿಸಬೇಕು ಎಂದು ಹೇಳಿದರು. ಬಾಲ್ಯದ ಕಡು ಬಡತನ, ಜೀವನದಲ್ಲಿ ಎದುರಾದ ಸಮಸ್ಯೆ-ಸವಾಲು, ಬದುಕು-ಬರಹ, ಸಾಹಿತ್ಯ ಕ್ಷೇತ್ರದಲ್ಲಿ ಕ್ರಮಿಸಿದ ದಾರಿಯನ್ನು ಸಹ ತೆರೆದಿಟ್ಟರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಡಾ.ಮನು ಬಳಿಗಾರ, ಡಾ.ಸಂಗಮೇಶ ಸವದತ್ತಿಮಠ, ಮೈಸೂರಿನ ಡಾ.ರಾಜಶೇಖರ ಜಮದಂಡಿ, ಸಹನಾ ವಿಜಯಕುಮಾರ ಇತರರಿದ್ದರು.

ಡಾ.ಎಸ್.ಎಲ್. ಭೈರಪ್ಪ ರಚಿಸಿದ ಮೌಲಿಕ ಕಾದಂಬರಿಗಳು ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಲ್ಲದೆ ದೇಶದ ೨೦ ಭಾಷೆಗಳಲ್ಲಿ ಅನುವಾದ ಹಾಗೂ ಮರುಮುದ್ರಣ ಕಂಡಿವೆ. ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಾಗಿವೆ. ಶ್ರೇಷ್ಠ ಸಾಹಿತಿ, ಚಿಂತಕ, ಪ್ರಖರ ವಾಗ್ಮಿ, ವಿಮರ್ಶಕ, ಕಾದಂಬರಿಕಾರರಾಗಿರುವ ಅವರ ಅಪ್ರತಿಮ ಸಾಧನೆ ಪರಿಗಣಿಸಿ ಹಾರಕೂಡ ಸಂಸ್ಥಾನ ಹಿರೇಮಠದಿಂದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
| ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಹಾರಕೂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net