

ಬಸವಕಲ್ಯಾಣ: ತಹಸಿಲ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ಶುಕ್ರವಾರ ಸಾರ್ವಜನಿಕರ ಕೊಂದುಕೊರತೆ ಆಲಿಸಿ ಅಹವಾಲು ಸ್ವೀಕರಿಸಿ ಕೆಲ ಅರ್ಜಿಗಳನ್ನು ತಕ್ಷಣ ಇತ್ಯರ್ಥಪಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಯಿತು.
ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದ ಆಗುತ್ತಿರುವ ಸಮಸ್ಯೆ, ಕಳಪೆ ರಸ್ತೆ ಕಾಮಗಾರಿ ಇತರ ವಿಷಯಗಳ ಕುರಿತು ಜನರ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರ ಸಹಕಾರ ಬೇಕು. ಯಾವುದೇ ಕೆಲಸಕ್ಕೆ ಯಾರೇ ಲಂಚದ ಬೇಡಿಕೆ ಇಟ್ಟರೆ ದೂರು ನೀಡಲು ಜನ ಮುಂದಾದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅರ್ಜಿ ವಿಲೇವಾರಿಗೆ ಅನಗತ್ಯ ವಿಳಂಬ ಮಾಡಬಾರದು. ಯಾವುದೇ ರೀತಿಯ ದೂರು ಬರದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಿಯಮದ ವಿರುದ್ಧ ಕೆಲಸ ಮಾಡಲು ಯಾರಾದರೂ ಒತ್ತಾಯ ಮಾಡಿದರೆ ಅಧಿಕಾರಿಗಳು ಸಹ ದೂರು ನೀಡಬಹುದು ಎಂದರು.
ಹುಲಸೂರು ತಾಲೂಕಿನ ಬೇಲೂರ ಹಾಗೂ ಗೋರ್ಟಾ(ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎರಡು ಪ್ರಕರಣ ದಾಖಲಾಗಿದ್ದವು. ಬೇಲೂರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಅವ್ಯವಹಾರದ ತನಿಖೆ ಪೂರ್ಣಗೊಂಡಿದ್ದು, ಗೋರ್ಟಾ ವ್ಯಾಪ್ತಿಯ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದರು.
ಎಪಿಎಂಸಿಯಲ್ಲಿ ರೈತರು ಮಧ್ಯವರ್ತಿಗಳಿಂದ ಸಮಸ್ಯೆ ಎದುರಿಸಬೇಕಾಗುತ್ತಿದೆ. ಕ್ವಿಂಟಾಲ್‌ಗೆ ೩ ಕೆಜಿ ಕೃಷಿ ಉತ್ಪನ್ನ, ಶೇ.೨ರಂತೆ ಹಣ ಕಡಿತಗೊಳಿಸುತ್ತಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ರುದ್ರಯ್ಯ ಸ್ವಾಮಿ, ಪ್ರಮುಖರಾದ ವೀರಾರೆಡ್ಡಿ, ಕಾಶಪ್ಪ ಬಿರಾದಾರ ಗಮನ ಸೆಳೆದರು. ಅಲ್ಲದೆ ಹೆಸರು ಮತ್ತು ಉದ್ದು ಖರೀದಿ ಕೇಂದ್ರ ತೆರೆಯಬೇಕು ಸೇರಿ ಇತರ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು. ಸ್ಪಂದಿಸಿದ ಅಧಿಕಾರಿಗಳು ಪರಿಶೀಲಿಸಿ ನೋಟಿಸ್ ಕೊಡಿ. ಅಗತ್ಯಬಿದ್ದರೆ ಕ್ರಮ ಜರುಗಿಸಬೇಕು ಎಂದು ಸ್ಥಳದಲ್ಲಿದ್ದ ಎಪಿಎಂಸಿ ಅಧಿಕಾರಿಗೆ ನಿರ್ದೇಶನ ನೀಡಿದರು.
ಸಹಾಯಕ ಆಯುಕ್ತ ಮುಕುಲ್ ಜೈನ್, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಲೋಕಾ ಇನ್‌ಸ್ಪೆಕ್ಟರ್‌ಗಳಾದ ಬಾಬಾಸಾಹೇಬ ಪಾಟೀಲ್, ಉದ್ದಂಡಪ್ಪ, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಸಿಪಿಐ ಅಲಿಸಾಬ್, ಪಿಎಸ್‌ಐಗಳಾದ ಜಯಶ್ರೀ ಹೊಡಲ್, ಸುವರ್ಣಾ ಮಲಶೆಟ್ಟಿ, ಲೋಕಾ ಸಿಬ್ಬಂದಿ ವಿಷ್ಣುರೆಡ್ಡಿ, ಭರತ್, ಅಡೆಪ್ಪ, ಕಿಶೋರ, ಕುಶಾಲ್, ನಾಗಶೆಟ್ಟಿ, ಕಂಟೆಪ್ಪ ಇತರರಿದ್ದರು.