

ಬಸವಕಲ್ಯಾಣ: ಬಸವಾದಿ ಶಿವಶರಣರ ತತ್ವಾದರ್ಶಗಳು ಜಾಗತಿಕ ಮಟ್ಟದಲ್ಲಿ ಪ್ರಚಾರ-ಪ್ರಸಾರವಾಗಲಿ ಹಾಗೂ ವಿಶ್ವಕ್ಕೆ ಬೆಳಕು ನೀಡಲಿ ಎನ್ನುವ ಸದಾಶಯದಿಂದ ಅನುಭವ ಮಂಟಪಪದಲ್ಲಿ ಪ್ರತಿ ವರ್ಷ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಅದ್ದೂರಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿಯ ವಿಶ್ವ ಬಸವ ಧರ್ಮ ಟ್ರಸ್ಟ್ ವತಿಯಿಂದ ೪೫ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ತ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ನ.೨೩ ಹಾಗೂ ೨೪ ರಂದು ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಸುಧಾ ಮೂರ್ತಿ, ರಾಹುಲ್ ದ್ರಾವೀಡ್, ಪವನ್ ಕಲ್ಯಾಣ ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.
ಬಸವ ತತ್ವ ಬಹಳ ವೇಗವಾಗಿ ಬೆಳೆ ಬೇಕಿತ್ತು. ಆದರೆ ಪಟ್ಟಭದ್ರ ಹಿತಾಸಕ್ತಿಗಳಿಂದ ಇದಕ್ಕೆ ಹಿನ್ನಡೆಯಾಗಿದೆ. ಬಸವ ತತ್ವವನ್ನು ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೆ ತಂದಿದ್ದಾರೆ. ಆದರೂ ಸಹ ಸಮಾಜದಲ್ಲಿನ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳು ದೂರ ಆಗಬೇಕಾದರೆ ಬಸವ ತತ್ವ ಒಂದೇ ಮಾರ್ಗ ಎಂದರು.
ನೂತನ ಅನುಭವ ಮಂಟಪ ನಿರ್ಮಾಣ ಆಗುತ್ತಿದೆ. ಈ ಅನುಭವ ಮಂಟಪ ರಾಜ್ಯ, ರಾಷ್ಟçಕ್ಕೆ ಸೀಮಿತಗೊಳ್ಳದೆ ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಬೇಕು ಎಂಬ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿದೆ. ಈ ಕಟ್ಟಡದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಸಂಬಂಧಿತರಿಗೆ ಸೂಚನೆ ನೀಡಲಾಗಿದೆ. ೨೦೨೫ಕ್ಕೆ ಡಿಸೆಂಬರ್ ವೇಳೆಗೆ ಲೋಕಾರ್ಪಣೆ ಗೊಳಿಸಲಾಗುವದು ಎಂದು ಭರವಸೆ ನೀಡಿದರು.
ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಮುಂದಿನ ದಿನಗಳಲ್ಲಿ ಬಸವಕಲ್ಯಾಣಕ್ಕೆ ಅಂತಾರಾಷ್ಟ್ರೀಯ ಕೇಂದ್ರವಾಗುವ ನಿಟ್ಟಿನಲ್ಲಿ ಹುಮನಾಬಾದ್ ಮೂಲಕ ರೈಲ್ವೆ ಲೈನ್ ತರಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಕಾಯಕ ಭೂಮಿಯಾದ ಬಸವಕಲ್ಯಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಜಿಲ್ಲಾ ಕೇಂದ್ರವಾಗಿ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಎಂಟು ತಾಲೂಕುಗಳಿದ್ದು ಬಸವಕಲ್ಯಾಣಕ್ಕೆ ನಾಲ್ಕು ತಾಲೂಕುಗಳು ಸೇರಿಸಿ ಜಿಲ್ಲಾ ಕೇಂದ್ರವಾಗಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, ಶ್ರೀ ಲಿಂ. ಚನ್ನಬಸವ ಪಟ್ಟದ್ದೇವರು ಅಂದು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಿ ಕಲ್ಯಾಣಕ್ಕೆ ಬೆಳಕು ನೀಡಿದರು. ನೂತನ ಅನುಭವ ಮಂಟಪ ನಿರ್ಮಿಸಲು ಡಾ. ಬಸವಲಿಂಗ ಪಟ್ಟದ್ದೇವರು ಸತತವಾಗಿ ಶ್ರಮಿಸಿದ ಫಲವಾಗಿ ಇದೀಗ ಚಾಲನೆ ನೀಡಲಾಗಿದೆ. ಲಿಂಗಾಯತ ಧರ್ಮಿಯರಿಗೆ ಬಸವಕಲ್ಯಾಣ ಧರ್ಮ ಕೇಂದ್ರವಾಗಿ ಬೆಳೆಯಲಿ ಎಂದು ಹೇಳಿದರು.
ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಡಾ.ಗಂಗಾಂಬಿಕೆ ಅಕ್ಕ, ಜಗದ್ಗುರು ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಶಾಸಕ ಶರಣು ಸಲಗರ ಮಾತನಾಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ, ಪ್ರಮುಖರಾದ ಧನರಾಜ ತಾಳಂಪಳ್ಳಿ, ಭಾರತಬಾಯಿ ಶೇರಿಕಾರ, ಡಾ.ಎಸ್.ಬಿ ದುರ್ಗೆ, ಮೀರ್ ಅಜರ್ ಅಲಿ ನವರಂಗ್, ಶಿವರಾಜ ನರಶೆಟ್ಟೆ, ಜೈರಾಜ ಖಂಡ್ರೆ, ವೀರಾರಡ್ಡಿ ಪಾಟೀಲ್ ಇದ್ದರು.
ರಾಜಕುಮಾರ ಹೂಗಾರ ವಚನ ಗಾಯನ ಮಾಡಿದರೆ, ವೈಜಿನಾಥ ಕಾಮಶೆಟ್ಟಿ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಕಲ್ಯಾಣದಲ್ಲಿ ಅಧಿವೇಶನ ನಡೆಸಿ: ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದಲ್ಲಿ ವಿಧಾನಸಭೆ ಅಧಿವೇಶ ನಡೆಯಬೇಕು ಎಂದು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶಯ ವ್ಯಕ್ತಪಡಿಸಿದರು. ನೂತನ ಅನುಭವ ಮಂಟಪ ನಾಡಿಗೆ ಲೋಕಾರ್ಪಣೆಗೊಂಡ ಬಳಿಕ ಅನುಭವ ಮಂಟಪದಲ್ಲಿ ಒಂದು ಬಾರಿ ಅಧಿವೇಶನ ನಡೆಸಲು ಸರ್ಕಾರದ ಮಟ್ಟದಲ್ಲಿ ಬೇಕಾದ ಕ್ರಮಕೈಗೊಳ್ಳಬೇಕು. ಬಸವಕಲ್ಯಾಣದಲ್ಲಿ ೨೯ ಗವಿಗಳು ಅಭಿವೃದ್ದಿ ಪಡಿಸಲು ಸರ್ಕಾರ ಮುಂದಾಗಿದ್ದು, ಆ ಸ್ಥಳಗಳನ್ನು ಕಂದಾಯ ಇಲಾಖೆಯಿಂದ ಬಿಕೆಡಿಬಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಖಂಡ್ರೆ ಅಧ್ಯಕ್ಷ ಸಲಗರ ಕಾರ್ಯಾಧ್ಯಕ್ಷ: ೪೫ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಶಾಸಕ ಶರಣು ಸಲಗರ ಅವರನ್ನು ಕಾರ್ಯಾಧ್ಯಕ್ಷರಾಗಿ ಘೋಷಿಸಿ ಸನ್ಮಾನಿಸಲಾಯಿತು.
ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿರುವುದು ಬಸವ ಭಕ್ತರಿಗೆ ಬಹಳಷ್ಟು ಸಂತಸವಾಗಿದೆ. ಅನುಭವ ಮಂಟಪದ ಜತೆಯಲ್ಲಿಯೇ ಐತಿಹಾಸಿಕ ಪರುಷಕಟ್ಟೆ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಅನುಭವ ಮಂಟಪದ ಲೋಕಾರ್ಪಣೆ ಸಮಾರಂಭಕ್ಕೆ ಸಂತರು, ರಾಷ್ಟ್ರದ ನಾಯಕರು, ಗಣ್ಯರುನ್ನು ಆಹ್ವಾನಿಸಬೇಕು.
| ಶರಣು ಸಲಗರ ಶಾಸಕ