ನವೆಂಬರ್‌ನಲ್ಲಿ ಕಲ್ಯಾಣ ಕರ್ನಾಟಕ ಸಮಾವೇಶ

18BK1
Published on

ಬಸವಕಲ್ಯಾಣ: ರಾಜ್ಯ ಸರ್ಕಾರದಿಂದ ನೂತನ ಅನುಭವ ಮಂಟಪ ನಿರ್ಮಾಣ ಜತೆಗೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಪ್ರವಾಸಿ ಕೇಂದ್ರವಾಗಿ ಬಸವಕಲ್ಯಾಣ ಪ್ರಗತಿ ಕಾಣುತ್ತಿದ್ದು, ಪ್ರವಾಸಿಗರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಅವರಿಗೆ ಸ್ಮಾರಕಗಳ ಮಾಹಿತಿ ನೀಡಲು ಪ್ರವಾಸಿ ಮಾಹಿತಿ ಕೇಂದ್ರ ಆರಂಭಿಸಲಾಗಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ಕ್ಷೇತ್ರ ಸಮಿತಿ ಬಸವಕಲ್ಯಾಣ ಸೋಮವಾರ ಇಲ್ಲಿನ ಬಸವ ಮಹಾಮನೆ ಪರಿಸರದ ೧೦೮ ಅಡಿ ಬಸವೇಶ್ವರರ ಮೂರ್ತಿ ಹತ್ತಿರ ಆಯೋಜಿಸಿದ್ದ ಮೂರು ದಿನದ ಪ್ರವಾಸಿ ಮಾರ್ಗದರ್ಶಕರ ತರಬೇತಿ ಶಿಬಿರದ ಸಮಾರೋಪ ಮತ್ತು ಪ್ರವಾಸಿ ಮಾಹಿತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರವಾಸಿ ಮಾಹಿತಿ ಕೇಂದ್ರದಲ್ಲಿ ಸ್ಮಾರಕಗಳ ಪಟ್ಟಿ, ವಿವರ, ನಕಾಶೆ ಮತ್ತು ವಿವರ ನೀಡಲು ಗೈಡ್ ವ್ಯವಸ್ಥೆ ಇರಲಿದೆ ಎಂದರು.
ಕಲ್ಯಾಣಕ್ಕೆ ಕಳೆದ ವರ್ಷ ಎರಡು ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದು, ಈ ವರ್ಷ ಸುಮಾರು ಮೂರು ಲಕ್ಷ ಜನ ಬರುವ ನಿರೀಕ್ಷೆ ಇದೆ. ನವೆಂಬರ್‌ನಲ್ಲಿ ಕಲ್ಯಾಣ ಕರ್ನಾಟಕದ ಬೃಹತ್ ಸಮಾವೇಶ ನಡೆಯಲಿದ್ದು, ಕನಿಷ್ಠ ಒಂದು ಲಕ್ಷ ಜನ ಭಾಗವಹಿಸಲಿದ್ದಾರೆ. ಸುತ್ತೂರು ಶ್ರೀಗಳು ಐದು ದಿನ ಆಗಮಿಸಲಿದ್ದು, ವಿಶೇಷ ತರಬೇತಿ ಶಿಬಿರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಕೊಪ್ಪಳ ಶ್ರೀಗಳು ೧೦ ದಿನ ಕಲ್ಯಾಣದಲ್ಲಿ ಇರಲು ಒಪ್ಪಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಡಾ.ಗಂಗಾAಬಿಕಾ ಅಕ್ಕ ಮಾತನಾಡಿ, ಶಿಬಿರದಲ್ಲಿ ತರಬೇತಿ ಪಡೆದವರು ಕಲ್ಯಾಣಕ್ಕೆ ಬರುವ ಪ್ರವಾಸಿಗರಿಗೆ ಶರಣರ ಸ್ಥಳಗಳ ಬಗ್ಗೆ ಸೂಕ್ತ ಮಾಹಿತಿ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಟೂರಿಸ್ಟ್ಗಳು ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಅನುಭವ ಮಂಟಪ ಟ್ರಸ್ಟ್ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಸಾಹಿತಿ ಪ್ರೊ.ಸಿದ್ದು ಯಾಪಲಪರವಿ, ಭಾಲ್ಕಿಯ ಪ್ರಥಮ ದರ್ಜೆ ಗುತ್ತಿಗೆಗಾರ ಚನ್ನಬಸವಣ್ಣ ಬಳತೆ ಮಾತನಾಡಿದರು.
ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಕ್ಷೇತ್ರ ಸಮಿತಿ ಸದಸ್ಯೆ ಕಾವೇರಿ ಪಾಟೀಲ್, ಉದ್ಯಮಿ ಕಲ್ಯಾಣರಾಯ ಶಿವಣಕರ್ ಇತರರಿದ್ದರು. ಡಾ.ಮಹೇಶ ಪಾಟೀಲ್ ಸ್ವಾಗತಿಸಿದರು. ಶ್ರೀದೇವಿ ಕಾಕನಾಳೆ ನಿರೂಪಣೆ ಮಾಡಿದರು. ಗುರುಪ್ರಸಾದ ಪಂಡಿತ ಪ್ರಾರ್ಥನಾ ಗೀತೆ ಹಾಡಿದರು. ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net