

ನಿಡಗುಂದಿ: ರಾಜ್ಯದಲ್ಲಿ ಮತ್ತೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸೆ.24ರಂದು ವಿಜಯಪುರ ಜಿಲ್ಲೆಯ ಚಡಚಣ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವಜಯ ಮತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಪಂಚಮಸಾಲಿ ಸಮುದಾಯದ ನಿಡಗುಂದಿ ಹಾಗೂ ಕೊಲ್ಹಾರ ತಾಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ 2ಡಿ ಮೀಸಲಾತಿ ನೀಡಿ ಅಥವಾ ಪ್ರವರ್ಗ 2ಎಗೆ ಸೇರ್ಪಡೆ ಮಾಡಬೇಕು. ಹಸಿದ ಪಂಚಮಸಾಲಿ ಸಮಾಜಕ್ಕೆ ಪ್ರಸಾದ ನೀಡಬೇಕು. ಸಿಎಂ ಸಿದ್ದರಾಮಯ್ಯ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ನ್ಯಾಯ ನೀಡಬೇಕು. ನಿಡಗುಂದಿ ತಾಲೂಕಿನಲ್ಲಿ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಸೆ.24 ರಂದು ನಡೆಯುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸುವ ಮೂಲಕ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಶ್ರಮಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಪಪಂ ಮಾಜಿ ಅಧ್ಯಕ್ಷ ಸಂಗಮೇಶ ಬಳಿಗಾರ, ಬಿ.ಎಂ ಪಾಟೀಲ, ನಿಂಗನಗೌಡ ಸೋಲಾಪುರ, ಬಸವರಾಜ ಬಾದರದಿನ್ನಿ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ಶರಣಪ್ಪ ಕಾಜಗಾರ, ಮುತ್ತು ಕಾಜಗಾರ, ಚೈತ್ರಾ ಮಾಮನಿ, ನಾಗಮ್ಮ ಕಾಜಗಾರ, ಸಿದ್ದು ಬಿರಾದಾರ ಇತರರಿದ್ದರು.