

ಮುಂಡರಗಿ: ಬಸವಣ್ಣನವರು ಸೇರಿದಂತೆ 12ನೇ ಶತಮಾನದಲ್ಲಿ ಎಲ್ಲ ಶರಣರು ಅನುಭವ ಮಂಟಪದ ಮೂಲಕ ಈ ಪ್ರಪಂಚಕ್ಕೆ ಸನ್ಮಾರ್ಗವನ್ನು ತೋರಿಸಿಕೊಟ್ಟರು. ಬಸವಣ್ಣನವರ ತತ್ವ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಉತ್ತಮವಾಗಿರುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಗುರುವಾರ ಆಯೋಜಿಸಿದ್ದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ದೇಶದ ಪ್ರಗತಿಗೆ ಕೈಜೋಡಿಸಬೇಕು. ದೇಶ ಸಮೃದ್ಧವಾಗಿದ್ದರೆ ನಾವು ನೆಮ್ಮದಿಯಿಂದ ಗೌರವವಿತವಾಗಿ ಬದುಕಲು ಸಾಧ್ಯ. ದೇಶದ ವಿಚಾರ ಬಂದಾಗ ಪಕ್ಷ, ಜಾತಿ, ಬೇಧ ಮರೆತು ನಾವೆಲ್ಲರು ಒಟ್ಟಾಗಿ ನಿಲ್ಲಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ದೊಡ್ಡ ಪರಂಪರೆ ಇದೆ. ಮಾನವ ಹಕ್ಕುಗಳ ಪ್ರತಿಪಾದನೆ ಮಾಡುವುದು ಲಿಂಗಾಯತ ಪರಂಪರೆಯಾಗಿದೆ. ಲಿಂಗಾಯತ ಮಠಾಧೀಶರು ಪ್ರಸಾದ ನಿಲಯವನ್ನು ತೆರೆದು ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವಂತಹ ಕೆಲಸ ಮಾಡಿದರು. ಅವರು ಗುಡಿ ಗುಂಡಾರ ಕಟ್ಟದೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಲ್ಲರ ಮನೆಗೆ ಬೆಳಕಾದರು. ಲಿಂಗಾಯತ ಎಂಬುವುದು ಜಾತಿ ಅಲ್ಲ, ಅದು ಮನುಷ್ಯತ್ವದ ಶಬ್ಧ. ಇದನ್ನು ಲಿಂಗಾಯತರು ಅಭಿಮಾನದಿಂದ ಹೇಳಬೇಕು. ಕಲ್ಯಾಣ ಕ್ರಾಂತಿಯ ನಂತರ ಶರಣ ಧರ್ಮ ನಶಿಸಿ ಹೋಗುವಂತಹ ಸಂದರ್ಭದಲ್ಲಿ ಎರಡನೇಬಸವಣ್ಣನಾಗಿ ಯಡಿಯೂರ ಸಿದ್ಧಲಿಂಗೇಶ್ವರರು ವಚನಸಾಹಿತ್ಯ ಉಳಿಸಿ ಬೆಳೆಸಿದರು. ಶರಣ ಧರ್ಮವನ್ನು ಪುನರುತ್ಥಾನಗೊಳಿಸಿದರು ಎಂದರು.
ಪೂಜ್ಯಶ್ರೀ ಬಸವೇಶ್ವರಿ ಮಾತಾಜಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಾಸಕ ಡಾ.ಚಂದ್ರು ಲಮಾಣಿ, ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ ಇತರರು ಇದ್ದರು. ಕೊಟ್ರೇಶ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.