ಡಾ.ಬಸವಲಿಂಗ ಪಟ್ಟದ್ದೇವರ ಸೇವೆ ಶ್ಲಾಘನೀಯ

29BK1
ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಗೆ ಬಸವಬಾನು ಪ್ರಶಸ್ತಿಯನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿದರು. ಶ್ರೀ ಗುರುಬಸವ ಪಟ್ಟದ್ಧೇವರು, ಸುಭಾಷಚಂದ್ರ ನಾಗರಾಳೆ, ಬಿ.ಕೆ.ಹಿರೇಮಠ, ಬಾಬು ಹೊನ್ನಾನಾಯಕ, ವೈಜಿನಾಥ ಕಾಮಶೆಟ್ಟಿ, ಸಿದ್ರಾಮಪ್ಪ ಗುದಗೆ, ಮಲ್ಲಿನಾಥ ಹಿರೇಮಠ, ಅಪ್ಪಣ್ಣ, ಶಂಕರ ಮದರಗೈ ಇತರರಿದ್ದರು.
Published on

ಬಸವಕಲ್ಯಾಣ: ಬಸವ ತತ್ವದ ಗಟ್ಟಿ ತಳಹದಿ ಮೇಲೆ ಸಮಾಜದ ಒಳಿತಿಗಾಗಿ ಪ್ರತಿ ಮನಸ್ಸು ಬಸವಾನುಭೂತಿ ಪಡೆಯಬೇಕು ಎಂಬ ನಿಶ್ಚಲ ನಿಲುವಿನೊಂದಿಗೆ ಅವಿರತ ಶ್ರಮಿಸುತ್ತಿರುವ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸೇವೆ ಪ್ರಶಂಸನೀಯ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಕೊಂಡಾಡಿದರು.

ಹಾರಕೂಡ ಸಂಸ್ಥಾನ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಭಾಲ್ಕಿ ಪೂಜ್ಯರು ಸಲ್ಲಿಸಿದ ಅಮೋಘ ಸೇವೆ ಗುರುತಿಸಿ ಹಾರಕೂಡ ಶ್ರೀಮಠದಿಂದ ಬಸವಬಾನು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ ಎಂದರು.

ಬಸವ ಪ್ರಭುವಿನ ಚಿಂತನೆ, ಬಸವಾದಿ ಶರಣರ ಸಂದೇಶವನ್ನು ನಾಡಿನಾದ್ಯಂತ ಪಸರಿಸುವಲ್ಲಿ ವಿಶೇಷ ಸೇವೆಗೈಯುತ್ತಿರುವ ಪೂಜ್ಯರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಗೌರವ ನೀಡಿರುವುದು ತುಂಬ ಖುಷಿ ತಂದಿದೆ. ಭಾಲ್ಕಿ ಮಠದಿಂದ ಬಸವ ಸೇವೆ ನಿತ್ಯ ನಿರಂತರ ಸಾಗುವಂತಾಗಿ ಜನರ ಬದುಕಿಗೆ ಬಸವ ಬೆಳಕು ಪ್ರಾಪ್ತವಾಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.

ಬಸವಬಾನು ಪ್ರಶಸ್ತಿ ಸ್ವೀಕರಿಸಿದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಹಾರಕೂಡ ಶ್ರೀಮಠ ವಿಶಿಷ್ಟವಾಗಿ ಶಿಸ್ತಿನ ಗರಡಿ ಮನೆಯಂತಿದೆ. ಶ್ರೀ ಡಾ.ಚನ್ನವೀರ ಶಿವಾಚಾರ್ಯರಲ್ಲಿರುವ ಔದಾರ್ಯ, ಮಾತೃವಾತ್ಸಲ್ಯ ಇಂದಿನ ಸಮಾಜಕ್ಕೆ ಬಹುದೊಡ್ಡ ಪಾಠವಾಗಿದೆ. ಹಾರಕೂಡ ಶ್ರೀಮಠ ಎಂದರೆ ೨೧ನೇ ಶತಮಾನದ ಭಕ್ತಿಯ ಪರುಷ ಕಟ್ಟೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೂಜ್ಯರು ನೀಡಿದ ಪ್ರಶಸ್ತಿ ಖುಷಿ ತಂದಿದೆ. ನನ್ನ ಎಲ್ಲ ಪ್ರಶಸ್ತಿಗಳು ಭಕ್ತರಿಗೆ ಸಮರ್ಪಿತ ಎಂದರು.

ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವತತ್ವ ಭಾರತ ಜಗತ್ತಿನ ಹೃದಯವಿದ್ದಂತೆ. ವಿಶ್ವಕ್ಕೆ ಯೋಗ, ಶಾಂತಿ ಮಂತ್ರ ಕೊಟ್ಟದ್ದು ಭಾರತ. ಸಮಾನತೆಗಾಗಿ ಕ್ರಾಂತಿ ನಡೆದ ನೆಲ ಬಸವಕಲ್ಯಾಣಬಸವ ತತ್ವ, ಬಸವಣ್ಣನವರ ವಿಚಾರ ಸರ್ವಾಕಾಲಿಕ ಪ್ರಸ್ತುತ. ಪ್ರಜೆಗಳು ರಾಜರಾಗಬೇಕು ಎಂಬ ಪರಂಪರೆ ಕೊಟ್ಟ, ವಿಶ್ವಕ್ಕೆ ಮೊಟ್ಟ ಮೊದಲಿಗೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು ಬಸವಣ್ಣನವರು ಎಂದು ಹೇಳಿದರು.

ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಅನುಭವ ಮಂಟಪ ಟ್ರಸ್ ಉಪಾಧ್ಯಕ್ಷ ವೈಜನಾಥ ಕಾಮಶೆಟ್ಟಿ, ಮುಖಂಡ ಬಾಬು ಹೊನ್ನಾನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ವಿಜಯಕುಮಾರ ಸಂಗೋಳಗೆ, ಸುನೀತಾ ಚಲವಾ, ಶರಣೆ ಸತ್ಯಕ್ಕ, ಸುಜ್ಞಾನಿ ತಾಯಿ ಮನಗುಂಡಿ ಇತರರಿದ್ದರು.

ಅಂಬಾರಾಯ ಉಗಾಜಿ ಸ್ವಾಗತಿಸಿದರು. ಮಲ್ಲಿನಾಥ ಹಿರೇಮಠ ವಂದಿಸಿದರು. ಸಂಗೀತ ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾಗೀತೆ ನಡೆಸಿಕೊಟ್ಟರು.

ಕಲೆ, ಸಾಹಿತ್ಯ, ಸಂಗೀತ, ದಾಸೋಹ, ವಿವಿಧ ಸಾಧಕರಿಗೆ ನೀಡುತ್ತಿರುವ ಪ್ರಶಸ್ತಿಗಳು, ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸಮಾಜಮುಖಿ ಚಿಂತನಾ ಲಹರಿಯಿಂದ ಹೊರಬರುತ್ತಿರುವ ವಿನೂತನ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರೆ ಅವರನ್ನು ಸಮನ್ವಯ ಸಂತ ಎನ್ನುವುದರಲ್ಲಿ ಎರಡು ಮಾತಿಲ್ಲ.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಬಾನು ಪ್ರಶಸ್ತಿ ಪುರಸ್ಕೃತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net