

ಬೆಂಗಳೂರು: ದೇಶದಲ್ಲಿ ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತದಲ್ಲಿ ಸುಧಾರಣೆಗೆ ಬಸವತತ್ವ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬಸವ ಸಮಿತಿಯಲ್ಲಿ ಆಯೋಜಿಸಲಾಗಿದ್ದ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ 113ನೇ ಜಯಂತ್ಯುತ್ಸವ ಮತ್ತು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಬಸವತತ್ವದಲ್ಲಿ ಮನುಷ್ಯನ ಜೀವನ ಮತ್ತು ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳಿವೆ. ಎಲ್ಲ ಮಹಾತ್ಮರು ಒಂದೊಂದು ಅಂಶಗಳನ್ನಿಟ್ಟುಕೊಂಡು ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿದ್ದಾರೆ. ಆದರೆ ಬಸವಣ್ಣನವರು ಎಲ್ಲ ವಿಷಯಗಳನ್ನು ಇರಿಸಿಕೊಂಡು ಸುಧಾರಣೆ ತಂದಿರುವ ಏಕೈಕ ಮಹಾತ್ಮರು. ಇಂತಹ ಬಸವಣ್ಣನವರ ಕುರಿತು ಜಾಗತಿಕ ಅಧ್ಯಯನ ಪೀಠವೊಂದನ್ನು ಸ್ಥಾಪಿಸುವ ಅಗತ್ಯವಿದೆ. ಆ ಮೂಲಕ ಕೇವಲ ಜಿಲ್ಲೆ, ರಾಜ್ಯ, ವೀರಶೈವ ಸಮುದಾಯಕ್ಕೆ ಸೀಮಿತವಾಗಿರುವ ಬಸವಣ್ಣನವರ ತತ್ವಗಳನ್ನು ಇಡೀ ಮನುಕುಲಕ್ಕೆ, ಜಗತ್ತಿಗೆ ಕಳುಹಿಸಬೇಕಾಗಿದೆ. ಈ ಚಿಂತನೆಯ ಆಧಾರದಲ್ಲಿ ಆಡಳಿತ ನಡೆಸಿದ ಅಪರೂಪದ ರಾಜಕಾರಣ ಬಿ.ಡಿ.ಜತ್ತಿಯವರು. ಅವರ ಆಶಯದ ಲವಾಗಿ ಕೂಡಲಸಂಗಮ, ಬಸವಜನ್ಮಭೂಮಿಯ ಅಭಿವೃದ್ಧಿಯಾಯಿತು ಎಂದು ವಿವರಿಸಿದರು.
ಆಡಳಿತದಲ್ಲಿ ಭ್ರಷ್ಟಾಚಾರ ಮತ್ತಿತರ ಯಾವುದೇ ದೋಷಗಳನ್ನು ಜನ ಒಂದಿಷ್ಟು ಕಾಲ ಸಹಿಸುತ್ತಾರೆ. ಅದು ಮಿತಿಮೀರಿದಾಗ ಜನ ದಂಗೆ ಏಳುತ್ತಾರೆ. ನೇಪಾಳದ ಬೆಳವಣಿಗೆ ಇದಕ್ಕೆ ತಾಜಾ ಉದಾಹರಣೆ. ಈ ಬಗ್ಗೆ ನಮ್ಮ ನಾಯಕರು ಎಚ್ಚರಗೊಳ್ಳಬೇಕು.
ಎಂದು ವೀರಪ್ಪ ಮೊಯ್ಲಿ ಹೇಳಿದರು.
ಸಮಾರಂಭದಲ್ಲಿ ಬಸವ ವಿಭೂಷಣ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, 12 ಶತಮಾನದ ಶರಣರ ಆಂದೋಲನದ ಸಂದೇಶಗಳನ್ನು ಜಗತ್ತಿನೆಲ್ಲೆಡೆ ಪ್ರಸಾರ ಮಾಡುವಲ್ಲಿ ಬಸವ ಸಮಿತಿ ಶ್ರಮಿಸುತ್ತಿದೆ. ರಾಜಕೀಯದಲ್ಲಿರುವವರಿಗೆ ಸಾಹಿತ್ಯ, ಸಂಸ್ಕೃತಿಯ ಅಭಿರುಚಿ ಇದ್ದರೆ ಉತ್ತಮ ಆಡಳಿತ ನಡೆಸಲು ಸಾಧ್ಯ ಎಂಬುದನ್ನು ಬಿ.ಡಿ.ಜತ್ತಿಯವರು ತೋರಿಸಿದ್ದಾರೆ. ಸಂವಿಧಾನ, ಜನಸೇವೆ ಮತ್ತು ಬಸವನಿಷ್ಠೆ ಎಂಬ ತ್ರಿಪುಂಡ್ರವನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ರಾಜಕಾರಣಿ ಅವರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಹಾಸನದ ಯುನೈಟೆಡ್ ಅಕಾಡೆಮಿಯ ಮುಖ್ಯಸ್ಥ ಸಿ.ಎಂ.ಚಂದ್ರಶೇಖರ್, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿಯವರಿಗೆ ಬಸವಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಬೇಲಿಮಠದ ಶ್ರೀಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಉಪಾಧ್ಯಕ್ಷ ಪ್ರಭುದೇವ ಜಿಗಟೇರಿ, ಲೀಲಾದೇವಿ ಆರ್. ಪ್ರಸಾದ್, ಡಾ. ನಿರ್ಮಲಾ ಯಲಿಗಾರ್ ಮತ್ತಿತರರು ಉಪಸ್ಥಿತರಿದ್ದರು.