

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದು, ಬಸವ ತತ್ವವು ಸಮಾನತೆಯ ತತ್ವದ ತಳಹದಿಯಾಗಿದೆ ಎಂದು ಹಾವೇರಿ ವಿವಿ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ತಿರ್ಲಾಪುರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಬಸವೇಶ್ವರ ಅಧ್ಯಯನ ಪೀಠ ಹಾಗೂ ಕವಿವಿ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬಸವರಾಜ ಶಂಕರಗೌಡ ಪಾಟೀಲ ದತ್ತಿ ಉಪನ್ಯಾಸ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಶರಣರ ಜೀವನದ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.
ಬಸವ ತತ್ವವು 12ನೇ ಶತಮಾನದಲ್ಲಿ ಜಾತಿ ಭೇದ-ಭಾವ ನೀಗಿಸಿ ಸಮಾಜದಲ್ಲಿ ಸಮಾನತೆ ಸಾರವವನ್ನು ತಿಳಿಸಿದೆ. ಸಾಮರಸ್ಯ ಜೀವನ ನಡೆಸಲು ಬಸವ ತತ್ವ ತಳಹದಿಹಾಕಿ ಕೊಟ್ಟಿದೆ. ಸಮಾಜದ ನಿಜವಾದ ಸಂಪತ್ತು ಶರಣರ ಸರಳ ವಚನ ಸಾಹಿತ್ಯವಾಗಿದೆ. ಸಮ ಸಮಾಜದ ಪರಿಕಲ್ಪನೆ, ಸರಳ ಜೀವನ, ಸಜ್ಜನರ ಸಂಗ, ಸರಳ ಆಧ್ಯಾತ್ಮಿಕ ಜೀವನ ಪದ್ಧತಿ, ಉತ್ತಮ ನಡುವಳಿಕೆಗಳು ಬಸವ ತತ್ವದ ಅಂಶಗಳಾಗಿವೆ. ವಚನಕಾರರು ತಮ್ಮ ವಚನಗಳ ಮೂಲಕ ಜೀವದ ಉತ್ತಮ ಮೌಲ್ಯಗಳನ್ನು ಸಾಮಾನ್ಯ ಭಾಷೆಯಲ್ಲಿ ತಿಳಿಸಿದ್ದಾರೆ ಎಂದರು.
ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಪ್ರೊ.ಸಿ.ಎಂ.ಕುಂದಗೋಳ ಮಾತನಾಡಿದರು.
ಡಾ. ಪ್ರಭಾ ಗುಡದಾನವೇರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಆರ್.ಎಚ್.ನಾಯಕ್, ಡಾ. ಎನ್. ಎಸ್.ತಳವಾರ, ಡಾ.ಮಲ್ಲಿಕಾರ್ಜುನ ಪಾಟೀಲ, ಪ್ರಾಧ್ಯಾಪಕರು, ಇತರರು ಇದ್ದರು.