

ಶನಿವಾರಸಂತೆ: ಸಮೀಪದ ಚಿಕ್ಕ ಕೊಳತ್ತೂರು ಗ್ರಾಮದ ಶ್ರೀ ಬಾವಿ ಬಸವಣ್ಣ ದೇವರ ವಾರ್ಷಿಕ ಪೂಜಾ ಕಾರ್ಯಕ್ರಮ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಪ್ರತಿವರ್ಷದಂತೆ ಈ ಬಾರಿಯೂ ನೂರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ವಿಜೃಂಭಣೆಯಿಂದ ನೆರವೇರಿದವು. ಶನಿವಾರ ಸಂತೆ, ಯಸಳೂರು ಮತ್ತು ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ನೂರಾರು ಭಕ್ತರು ಧಾರ್ಮಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದರು.
ಧಾನ್ಯ ಸಮರ್ಪಣೆ:ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯ ಜಾನುವಾರುಗಳನ್ನು ಈ ಬಸವಣ್ಣ ರಕ್ಷಿಸುತ್ತಾನೆ ಎಂಬ ಪ್ರತೀತಿ ಇದೆ. ಹಾಗಾಗಿ ಪೂಜಾ ಕಾರ್ಯದ ಪ್ರಯುಕ್ತ ಗ್ರಾಮದ ವಿವಿಧ ಮನೆತನಗಳು ಅಕ್ಕಿ, ಬೆಲ್ಲ, ತರಕಾರಿ, ತೆಂಗಿನಕಾಯಿಗಳನ್ನು ಸಮರ್ಪಿಸುತ್ತವೆ. ಈ ಪದಾರ್ಥಗಳನ್ನೇ ಪ್ರಸಾದ ತಯಾರಿಕೆಗೆ ಬಳಸಲಾಗುತ್ತದೆ. ಹರಕೆ ಹೊತ್ತ ಕೆಲವು ಭಕ್ತರು ದೇವರಿಗೆ 101 ಈಡು ತೆಂಗಿನಕಾಯಿ ಹೊಡೆದು ಭಕ್ತಿ ಸಮರ್ಪಿಸಿದರು.
ಈ ವರ್ಷ ವಿವಾಹವಾದ ಗ್ರಾಮದ ಹೆಣ್ಣು ಮಕ್ಕಳು ವಾರ್ಷಿಕ ಪೂಜಾ ಕಾರ್ಯಕ್ರಮಕ್ಕಾಗಿ ತವರೂರಿಗೆ ಆಗಮಿಸಿ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಕಲ್ಯಾಣಿಯಲ್ಲಿ ಜೀವ ಜಲ:ಜಿಲ್ಲೆಯಲ್ಲಿ ಬೇಸಿಗೆ ತಾಪ ಹೆಚ್ಚಾಗಿದ್ದರೂ, ಸುತ್ತಮುತ್ತಲಿನ ಹೊಳೆ, ಕೆರೆ, ಹೊಂಡ, ಕೊಲ್ಲಿ, ಬಾವಿಗಳು ಬಿಸಿಲಿನ ಧಗೆಗೆ ಬತ್ತಿ ಹೋಗಿದ್ದರೂ ಇಲ್ಲಿರುವ ಕಲ್ಯಾಣಿಯಲ್ಲಿ ನೀರು ತುಂಬಿರುವುದು ವಿಶೇಷ. ಬಸವಣ್ಣನ ಸನಿಹದಿಂದ ಹರಿದು ಬರುವ ನೀರು ಕಲ್ಯಾಣಿಯನ್ನು ಸೇರುತ್ತಿದ್ದು, ಭಕ್ತರು ಗಂಗಾಪೂಜೆ ನೆರವೇರಿಸಿದರು.