

ಶ್ರೀರಂಗಪಟ್ಟಣ : ಸಮಾಜದಲ್ಲಿ ಸಮಾನತೆ ನಿರ್ಮಿಸಲು 12ನೇ ಶತಮಾನದಲ್ಲಿ ಬದುಕನ್ನೇ ಮೀಸಲಾಗಿಟ್ಟವರು ಕಾಯಕಯೋಗಿ ಬಸವಣ್ಣ ಎಂದು ನಿವೃತ್ತ ಉಪನ್ಯಾಸಕ ಪ್ರೊ. ಮಹದೇವು ಹೇಳಿದರು. ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ವೀರಶೈವ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿಯಲ್ಲಿ ಅವರು ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದರು.
ಜಾತಿ ವ್ಯವಸ್ಥೆ ತುಂಬಿದ್ದ ಸಮಾಜದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯೊಂದಿಗೆ ಕಾಯಕ ಧರ್ಮದ ಮೇಲೆ ಬಸವಣ್ಣ ಬೆಳಕು ಚೆಲ್ಲಿದರು. ಅವರ ಅಂದಿನ ಅನುಭವ ಮಂಟಪಕ್ಕೂ, ಭಾರತದ ಸಂಸತ್ತಿನ ನೀತಿಗಳಿಗೂ ಅನೇಕ ಸಾಮ್ಯತೆ ಇದೆ. ವಚನಗಳಿಂದಲೇ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಆದರ್ಶ ಬದುಕು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.