ನಗರಕ್ಕೆ ಬಸವ ಸಂಸ್ಕ್ರತಿ ರಥಯಾತ್ರೆ ಸೆ.6

Published on

ಬಳ್ಳಾರಿ : ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು. ಸೆ.6ರಂದು ನಗರಕ್ಕೆ ಆಗಮಿಸಲಿದೆ ಎಂದು ಸಿಎ ಸಿರಿಗೇರಿ ಪನ್ನರಾಜ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬಸವ ಸಂಸ್ಕ್ರತಿ ಅಭಿಯಾನ ಉತ್ಸವ ವತಿಯಿಂದ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ರಕ್ಷಿಸಲು ಹಾಗೂ ಪಸರಿಸುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನದ ಹಮ್ಮಿಕೊಳ್ಳಲಾಗಿದೆ ಎಂದರು.

ಸೆ.6ರಂದು ಬೆಳಗ್ಗೆ 9.30ಕ್ಕೆ ನಗರದ ಮೋಕಾ ರಸ್ತೆಯ ಕೆಆರ್‌ಎಸ್ ಫಂಕ್ಷನ್ ಬಳಿ ರಥಯಾತ್ರೆಯನ್ನು ಸ್ವಾಗತಿಸಲಾಗುವುದು. ಬಳಿಕ ಬೈಕ್ ರ‌್ಯಾಲಿ ಮೂಲಕ ಕೆಇಬಿ ವೃತ್ತ, ಕನಕದುರ್ಗಮ್ಮ ವೃತ್ತ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟ್, ತೇರು ಬೀದಿ ಮಾರ್ಗವಾಗಿ ಮೋತಿ ವೃತ್ತದವರೆಗೆ ಸಾಗಿ, ವೃತ್ತದಲ್ಲಿನ ಬಸವ ಪ್ರತಿಮೆ ಮಾರ್ಲಾಪಣೆ ಮಾಡಲಾಗುವುದು. ನಂತರ ಎಸ್ಪಿ ವೃತ್ತ ಮೂಲಕ ಪಾರ್ವತಿ ನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹೈಸ್ಕೂಲ್ ಮೈದಾನದವರೆಗೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಜೆ 4ಕ್ಕೆ ಪಾರ್ವತಿ ನಗರದ ಕಪ್ಪಗಲ್ಲು ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಹೈಸ್ಕೂಲ್ ಮೈದಾನದಿಂದ ಬಸವ ಭವನವರೆಗೆ ರಥಯಾತ್ರೆಯೊಂದಿಗೆ ಬೃಹತ್ ಪಥ ಸಂಚಲನ ಜರುಗಲಿದೆ. ಬಸವ ವನದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 8ಕ್ಕೆ ಶಿವಸಂಚಾರ ಸಾಣೇಹಳ್ಳಿ ತಂಡದಿಂದ ಜಂಗಮೆದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮುಖಂಡರಾದ ಎನ್.ಜಿ.ಬಸವರಾಜ್, ಯೋಗಿರಾಜ್, ಲಿಂಗನಗೌಡ, ಗಂಗಾವತಿ ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net