

ಹುಬ್ಬಳ್ಳಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನಿಂದ ರಮಣಶ್ರೀ ಪ್ರಶಸ್ತಿ ಪುರಸ್ಕೃತ ವಿಶ್ವಭಾರತಿ ರಮ್ಯ ನಾಟಕ ಸಂಘ (ಶಿರೂರ)ದ 21ನೇ ವಾರ್ಷಿಕೋತ್ಸವ, ಬಸವ ರಂಗ ಕಲಾಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜಗಜ್ಯೋತಿ ಬಸವೇಶ್ವರ ರಂಗನಾಟಕ ಪ್ರದರ್ಶನವನ್ನು ಜು.12 ರಂದು ಸಂಜೆ 5.30 ಕ್ಕೆ ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಂಘದ ಅಧ್ಯಕ್ಷ ಬಸವರಾಜ ಬೆಂಗೇರಿ, ಹಿರಿಯ ಕಲಾವಿದ ಬಸವರಾಜ ಶಿರಸನಾಳ ಅವರಿಗೆ ಬಸವ ರಂಗ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು
ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಂಗಮೇಶ ಲೋಕಾಪುರ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಬಸವ ಕೇಂದ್ರದ ಅಧ್ಯಕ್ಷ ಜಿ.ಬಿ. ಹಳ್ಯಾಳ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಡಾ. ಸ್ನೇಹಾ ಭೂಸನೂರ ಹಾಗೂ ಇನ್ನಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ವಿದೇಶದಲ್ಲಿ ಅವಕಾಶ ಕಲ್ಪಿಸಲಿ: ಕಳೆದ 21 ವರ್ಷಗಳಿಂದ ವಿಶ್ವಭಾರತಿ ರಮ್ಯ ನಾಟಕ ಸಂಘದಿಂದ ಬಸವಣ್ಣ, ಶಿವಾಜಿ, ಅಕ್ಕಮಹಾದೇವಿ ನಾಟಕ ಪ್ರದರ್ಶಿಸಲಾಗುತ್ತಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತಿನಲ್ಲಿಯೂ ಬಸವೇಶ್ವರರ ನಾಟಕ ಪ್ರದರ್ಶನ ಮಾಡಲಾಗಿದೆ. ಜಗಜೊ್ಯೕತಿ ಬಸವಣ್ಣ ಅವರು ಜಗತ್ತಿನ ದಾರ್ಶನಿಕರಾಗಿರುವುದರಿಂದ ವಿದೇಶದಲ್ಲಿ ನಾಟಕ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
ಗುರುಸಿದ್ದಪ್ಪ ಬಡಿಗೇರ, ಮಲ್ಲಿಕಾರ್ಜುನ ಕಮ್ಮಾರ , ಮಂಜುನಾಥ ಕುಂದೂರ, ಹನುಮಂತ ಹಿರೇಮನಿ, ವೈ.ಎಸ್. ಭರಮಕ್ಕನವರ ಸುದ್ದಿಗೋಷ್ಠಿಯಲ್ಲಿ ಇದ್ದರು.