ಮೌಢ್ಯದ ಆಚರಣೆಗಳನ್ನು ನಿಲ್ಲಿಸೋಣ: ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಕರೆ

Basava Panchami Mandya
Published on

ಮಂಡ್ಯ: ಮೌಢ್ಯದಿಂದ ಕೂಡಿದ ಆಚರಣೆಗಳನ್ನು ನಿಲ್ಲಿಸೋಣ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಕರೆ ನೀಡಿದರು.

ತಾಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಜನಾಂಗದ ಕಾಲನಿಯಲ್ಲಿ ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಬಸವ ಫೌಂಡೇಷನ್, ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಶುಕ್ರವಾರ ಬಸವ ಪಂಚಮಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಢ್ಯದ ಆಚರಣೆಗಳನ್ನು ಅನಕ್ಷರಸ್ಥರಾಗಿದ್ದಾಗ ಮಾಡುತ್ತಿದ್ದೆವು. ವಿದ್ಯಾವಂತರಾದ ಮೇಲೂ ಆಚರಿಸುವುದು ಸರಿಯಲ್ಲ. ಇನ್ನು ಮುಂದೆ ನಾಗರಪಂಚಮಿ ಕೈಬಿಟ್ಟು ಬಸವಣ್ಣನನ್ನು ಸ್ಮರಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಇಂದು ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣ ಅವರು ಲಿಂಗೈಕ್ಯವಾದ ಪುಣ್ಯದಿನ. ಆದರೆ ವೈದಿಕಶಾಹಿಗಳು ಬಸವಣ್ಣ ಅವರ ಮಹತ್ವ ಕುಗ್ಗಿಸುವ ಸಲುವಾಗಿ ಈ ದಿನವನ್ನು ನಾಗರಪಂಚಮಿ ಎಂದು ಆಚರಿಸುವ ಪದ್ಧತಿಯನ್ನು ಜಾರಿಗೆ ತಂದರು. ಇತಿಹಾಸ ತಿಳಿದ ಮೇಲೂ ನಾವು ನಾಗರಪಂಚಮಿ ಎಂದು ಆಚರಣೆ ಮಾಡುವುದು ಇತಿಹಾಸಕ್ಕೆ ಮಾಡುವ ಅಪಚಾರ ಎಂದರು.

ನಾಗರಹಾವು ಹಾಲು ಕುಡಿಯುವುದಿಲ್ಲ, ಅದು ಮಾಂಸಹಾರಿ ಸರಿಸೃಪ. ಇಲಿ, ಕಪ್ಪೆ, ಕ್ರಿಮಿಕೀಟಗಳು ಹಾವಿನ ಆಹಾರ. ಹಾಲನ್ನು ಹುತ್ತಕ್ಕೆ ಸುರಿದರೆ ಹಾಲು ಮಣ್ಣುಪಾಲಾಗುತ್ತದೆ. ಹುತ್ತದಲ್ಲಿನ ಹಾವಿನ ಮರಿಗಳು ಸಾಯುತ್ತವೆ ಇದು ವೈಜ್ಞಾನಿಕ ಸತ್ಯ. ಹಾಲನ್ನು ವ್ಯರ್ಥ ಮಾಡುವ ಬದಲು ಬಡ ಮಕ್ಕಳಿಗೆ ಕೊಡುವುದು ಸಾರ್ಥಕ ಕೆಲಸ ಎಂದು ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಉಪನ್ಯಾಸಕ ಕಲ್ಲಹಳ್ಳಿ ಲೋಕೇಶ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಡಿ.ದೇವರಾಜ್ ಕೊಪ್ಪ, ಜಿಲ್ಲಾ ಸಂಚಾಲಕಿ ಜಯಸುಧಾ, ಸಿದ್ದಶೆಟ್ಟಿ, ಹನಿಯಂಬಾಡಿ ವೈರಮುಡಿ ಇತರರಿದ್ದರು. ಇದೇ ವೇಳೆ ಅಲೆಮಾರಿ ಜನಾಂಗದ ಮಕ್ಕಳಿಗೆ ಹಾಲು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net