

ಮಂಡ್ಯ: ವಾಸ್ತವವಾಗಿ ಹಾವು ಹಾಲನ್ನು ಕುಡಿಯುವುದಿಲ್ಲ. ಉಳ್ಳವರು ಈ ಆಚರಣೆಯಲ್ಲಿ ಹಾಲನ್ನು ಹುತ್ತದ ಮಣ್ಣಿಗೆ ಸುರಿದು ವ್ಯರ್ಥ ಮಾಡುತ್ತಾರೆ. ದೇಶದಲ್ಲಿ ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂತಹ ಮಕ್ಕಳಿಗೆ ಹಾಲು ನೀಡುವ ಕೆಲಸ ಆಗಬೇಕಿದೆ ಎಂದು ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಹೇಳಿದರು.
ತಾಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಕಾಲನಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ಸಾಮಾಜಿಕ ಕಲ್ಯಾಣ ಕ್ರಾಂತಿ ಮಾಡಿದ ಬಸವಣ್ಣ ಅವರು ಲಿಂಗೈಕ್ಯರಾದ ದಿನ. ಈ ಮಹತ್ತರ ದಿನವನ್ನು ಮರೆಮಾಚುವ ಉದ್ದೇಶದಿಂದ ನಾಗರ ಪಂಚಮಿಯನ್ನಾಗಿ ಮಾಡಿ ಮೌಢ್ಯವನ್ನು ಬಿತ್ತಲಾಗಿದೆ ಎಂದರು.
ವೇದಿಕೆಯ ಜಿಲ್ಲಾ ಸಂಚಾಲಕ ಡಿ.ದೇವರಾಜ್ ಕೊಪ್ಪ ಮಾತನಾಡಿ, ಹಾವು ಮಾಂಸಾಹಾರಿ ಸಸ್ತನಿ. ಹುತ್ತಕ್ಕೆ ಹಾಲೆರೆದರೆ ಹಾಲು ಹುತ್ತದ ಮಣ್ಣಿನ ಪಾಲಾಗುತ್ತದೆಯೆ ಹೊರತು ಹಾವು ಕುಡಿಯುವುದಿಲ್ಲ. ಇಂತಹ ನೂರಾರು ಆಚರಣೆಗಳನ್ನು ಸಮಾಜದ ಮೇಲೆ ಹೇರಿ ಮೌಢ್ಯದತ್ತ ಸಮಾಜವನ್ನು ತಳ್ಳಲಾಗಿದೆ. ಬಡವರಿಗೆ ಸಹಾಯ ಮಾಡುವ ಮನಸ್ಸು ಉಳ್ಳವರಿಗಿಲ್ಲ. ದೇವರಿಗೆ ಲಕ್ಷಾಂತರ ರೂಗಳನ್ನು ಕಾಣಿಕೆ ಹಾಕುತ್ತಾರೆ. ಅದರ ಬದಲು ಸಮಾಜದ ಒಳಿತಿಗೆ ಕೆಲಸ ಮಾಡುವ ಉದಾರತೆ ತೋರಲಿ ಎಂದರು.
ವಕೀಲ ಸುಂಡಹಳ್ಳಿ ಮಂಜುನಾಥ್ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಕಳೆದ ಮೂರು ವರ್ಷಗಳಿಂದ ಇಂತಹ ಮೌಢ್ಯ ವಿರೋಧಿ ಕೆಲಸ ಮಾಡುತ್ತಾ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಾ ಬಂದಿದೆ ಎಂದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ಜಾನಪದ ಗಾಯಕ ಗೊರವಾಲೆ ಚಂದ್ರಶೇಖರ್, ಉಪನ್ಯಾಸಕ ಕೆ.ಸಿ.ಲೋಕೇಶ್ ಕಲ್ಲಹಳ್ಳಿ, ಮಂಜುನಾಥ್, ಹನಿಯಂಬಾಡಿ ಶೇಖರ್, ವೈರಮುಡಿ ಉಪಸ್ಥಿತರಿದ್ದರು. ಇದೇ ವೇಳೆ ಮಕ್ಕಳಿಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.