ಗಜೇಂದ್ರಗಡದಲ್ಲಿ ಬಸವ ಮಹಾ ಪುರಾಣ 25ರಿಂದ

purana
Published on

ಗಜೇಂದ್ರಗಡ: ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ನ. 25ರಿಂದ ಡಿ.26ರ ವರೆಗೆ ಬಸವ ಮಹಾ ಪುರಾಣ ನಡೆಯಲಿದೆ ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಅನ್ನದಾನೇಶ್ವರ ಕಾಲೇಜ್‌ನಲ್ಲಿ ಸೋಮವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಧುನಿಕತೆ ಹಾಗೂ ತಂತ್ರಜ್ಞಾನದಿಂದ ಜಗತ್ತು ಸಣ್ಣದಾಗುತ್ತಿದೆ. ಜತೆಗೆ ದೊಡ್ಡವರಲ್ಲಿ ಸಣ್ಣತನ ಹೆಚ್ಚಾಗುತ್ತಿದ್ದು, ಬಸವ ಪುರಾಣ ಇದಕ್ಕೆ ಮದ್ದಾಗಲಿದೆ. ಇಳಕಲ್-ಗುಡೂರಿನ ಅನ್ನದಾನ ಶಾಸ್ತ್ರಿಗಳು ಪ್ರವಚನಕಾರರಾಗಿ ಆಗಮಿಸಲಿದ್ದಾರೆ ಎಂದರು.

ಬಸವ ಪುರಾಣದಲ್ಲಿ ಕೇವಲ ಬಸವಣ್ಣನವರ ಕುರಿತಾದ ಪುರಾಣ ಇರುವುದಿಲ್ಲ. 780 ಅಮರಂಗಣಗಳ ಚರಿತ್ರೆ ಬರುವಂತ ವಿಶೇಷ ಪುರಾಣವಾಗಿದ್ದು, ಸರ್ವ ಧರ್ಮದ, ಸರ್ವ ಸಮಾಜದ ಜನರು ಈ ಬಸವ ಪುರಾಣಕ್ಕೆ ಬರುತ್ತಾರೆ. ಪುರಾಣದಲ್ಲಿ 8 ಕಾಂಡಗಳು ಬರುತ್ತವೆ. ಪ್ರತಿಯೊಂದು ಕಾಂಡದಲ್ಲಿ ಮೂರ್ನಾಲ್ಕು ಹಳ್ಳಿಗಳ ಜನರನ್ನು ಬರಮಾಡಿಕೊಳ್ಳುವ ಹಾಗೂ ಸಾಧ್ಯವಾದರೆ ಬಸವ ಬುತ್ತಿ ತರವು ವ್ಯವಸ್ಥೆ ಮಾಡಬೇಕಿದೆ. ಬಸವ ಪುರಾಣದಲ್ಲಿ ನಾಡಿನ ಹಲವಾರು ಮಠಾಧೀಶರು, ಅನ್ಯ ಧರ್ಮಗಳ ಗುರುಗಳು ಭಾಗವಹಿಸಲಿದ್ದಾರೆ. ಈ ಪುರಾಣದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಕಾರ್ಯಕ್ರಮದ ಉಸ್ತುವಾರಿಯನ್ನು ಗಜೇಂದ್ರಗಡದ ಅನ್ನದಾನೇಶ್ವರ ಸಂಸ್ಥಾನಮಠ, ವೀರಶೈವ ಲಿಂಗಾಯತ ಸಮಾಜ ಮತ್ತು ಸರ್ವ ಧರ್ಮದ ಗುರು ಹಿರಿಯರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸೇವಾರ್ಥಿಗಳಿಗೆ ಸನ್ಮಾನ ನಡೆಯಲಿದ್ದು, ಲಿಂಗ ಸಮಾನತೆ, ನೈತಿಕ ಮೌಲ್ಯಗಳ ಪ್ರತಿಪಾದನೆ, ಯುವ ಪೀಳಿಗೆಗೆ ಗುರು ಹಿರಿಯರ ಬಗ್ಗೆ ಗೌರವ ಕಾಳಜಿ ನೈತಿಕತೆ ರೂಢಿಸಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಬಸವ ಪುರಾಣಕ್ಕೆ ಪ್ರತಿನಿತ್ಯ 5 ಸಾವಿರಕ್ಕಿಂತ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ ಎಂದರು.

ಪ್ರವಚನಕಾರ ಅನ್ನದಾನ ಶಾಸ್ತ್ರಿಗಳು ಮಾತನಾಡಿದರು. ಶರಣಪ್ಪ ರೇವಡಿ, ಅಮರೇಶ ಗಾಣಿಗೇರ, ಟಿ.ಎಸ್. ರಾಜೂರ, ವಸಂತರಾವ ಗಾರಗಿ, ಗೋಪಿನಾಥ ರಾಯಬಾಗಿ, ಡಾ. ಬಿ.ವಿ. ಕಂಬಳ್ಯಾಳ, ಶಿವಯ್ಯ ಚಕ್ಕಡಿಮಠ, ಕಲ್ಲಪ್ಪ ಸಜ್ಜನರ, ಅಪ್ಪು ಮತ್ತಿಕಟ್ಟಿ, ರವಿ ಹಲಗಿ, ಬಸಯ್ಯ ಹಿರೇಮಠ, ವಿದ್ಯಾ ಬಂಡಿ, ಮಂಜುಳಾ ಕೋರಾಧಾನಮಠ, ಕೀರ್ತಿ ಕೊಟಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net