

ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ಬಿ.ನಾರಾಯಣರಾವ್ ಅವರು ಕೋಟ್ಯಧೀಶರಿದ್ದಾರೆ. ಇವರ ಕುಟುಂಬವು ಒಟ್ಟು 7.10 ಕೋಟಿ ರೂ. ಆಸ್ತಿ ಹೊಂದಿದೆ. ಮಲ್ಲಮ್ಮ ಅವರು ಬುಧವಾರ ಅನೌಪಚಾರಿಕವಾಗಿ ಸಲ್ಲಿಸಿದ ನಾಮಪತ್ರದ ವೇಳೆ ಘೋಷಿಸಿದ ಆಸ್ತಿ ಪ್ರಮಾಣಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಉದ್ಯೋಗದ ಕಾಲಂನಲ್ಲಿ ಮಲ್ಲಮ್ಮ ಅವರು ಸಮಾಜಸೇವೆ ಹಾಗೂ ಕೃಷಿಕರು ಎಂದು ಹೇಳಿದ್ದಾರೆ. ಬೆಂಗಳೂರು ಕೆನರಾ ಬ್ಯಾಂಕ್ ನಲ್ಲಿ 17.60 ಲಕ್ಷ ಹಣವಿಟ್ಟಿದ್ದಾರೆ. ಎಲ್ಐಸಿಯಲ್ಲಿ 5 ಲಕ್ಷ ಹೂಡಿದ್ದಾರೆ. ಬೀದರ್ ತಾಲೂಕಿನ ನಿಜಾಂಪುರ, ಕೊಳಾರದಲ್ಲಿ 4.36 ಎಕರೆ ಕೃಷಿ ಜಮೀನು, ಗೋರನಳ್ಳಿ ಬಳಿ ಪುತ್ರ ಗೌತಮ ಹೆಸರಿನಲ್ಲಿ 2.38 ಎಕರೆ ಜಮೀನು, ಇನ್ನೊಬ್ಬ ಪುತ್ರ ರಾಹುಲ್ ಹೆಸರಿನಲ್ಲಿ ಬೀದರ್ ತಾಲೂಕಿನ ಚಿಲ್ಲರ್ಗಿಯಲ್ಲಿ 2.10 ಎಕರೆ ಜಮೀನಿದೆ.
ಬೀದರ್ ಕೆ ಎಚ್ ಬಿ ಕಾಲನಿ, ಯಾದಗಿರಿಯಲ್ಲಿ 1200 ಚದರ ಅಡಿಯ ನಿವೇಶನ, ಬೆಂಗಳೂರಿನಲ್ಲಿ ಒಂದು ಮನೆಯಿದೆ ಎಂದು ವಿವರಿಸಿದ್ದಾರೆ. ಮಲ್ಲಮ್ಮ ಅವರ ಪತಿ ಬಿ.ನಾರಾಯಣರಾವ್ ಕರೊನಾಗೆ ಬಲಿಯಾದ ಕಾರಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮಲ್ಲಮ್ಮ ಅವರಿಗೆ ಅಭ್ಯರ್ಥಿ ಎಂದು ಘೋಷಿಸಿ ಬಿ.ಫಾರಂ ಸಹ ನೀಡಿದೆ. ಪಕ್ಷದ ರಾಜ್ಯ ನಾಯಕರ ಸಮ್ಮುಖದಲ್ಲಿ ಮಲ್ಲಮ್ಮ ಅವರು ಮಾ.30ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.