

ವಿಜಯಪುರ: ಮಹಾನ್ ಮಾನವತಾವಾದಿ, ವಿಶ್ವಜ್ಯೋತಿ ಬಸವೇಶ್ವರರ ಜಯಂತಿಯನ್ನು ಏ.30 ರಂದು ಅರ್ಥಪೂರ್ಣ ಹಾಗೂ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.29 ರಂದು ಸಂಜೆ 6ಕ್ಕೆ ಇಲ್ಲಿನ ಸಿದ್ಧೇಶ್ವರ ದೇವಸ್ಥಾನ ಬಳಿಯ ಶಿವಾನುಭವ ಮಂಟಪದಲ್ಲಿ ಶಾಲಾ ಮಕ್ಕಳು ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಏ. 30 ರಂದು ಬೆಳಗ್ಗೆ 8ಕ್ಕೆ ಬಸವೇಶ್ವರ ವೃತ್ತದಲ್ಲಿರುವ ಮಹನೀಯರ ಪ್ರತಿಮೆಗೆ ಪೂಜೆ ಸಲ್ಲಿಸಲಾಗುವುದು. ಬಳಿಕ ಸಂಜೆ 4ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಿದ್ಧೇಶ್ವರ ದೇವಸ್ಥಾನದವರೆಗೆ ಬೈಕ್ ರ‌್ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಂದೇ ಸಂಜೆ 4.30ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಜ್ಞಾನಯೋಗಾಶ್ರಮದವರೆಗೆ ಬಸವಣ್ಣನ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿದೆ. ಮೆರವಣಿಗೆಯಲ್ಲಿ 500ಕ್ಕೂ ಅಧಿಕ ಬಸವಣ್ಣನವರ ಗಣವೇಷಧಾರಿ ಮಕ್ಕಳು ಸೇರಿ ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು. ಅಲ್ಲದೆ, ವಚನ ಗ್ರಂಥಗಳನ್ನು ಹೊತ್ತ 500 ಕ್ಕೂ ಅಧಿಕ ಮಹಿಳೆಯರು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮತ್ತು ವಾದ್ಯವೃಂದಗಳು ಮೆರವಣಿಗೆಗೆ ಸಾಥ್ ನೀಡಲಿವೆ ಎಂದರು.
ಜ್ಞಾನಯೋಗಾಶ್ರಮದಲ್ಲಿ ಸಂಜೆ 6ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಅಕ್ಕಲಕೋಟದ ಪ್ರಾಧ್ಯಾಪಕ ಡಾ. ಗುರುಲಿಂಗಪ್ಪ ದಬಾಲೆ ಬಸವಣ್ಣನವರ ಕುರಿತು ಉಪನ್ಯಾಸ ನೀಡುವರು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿ ವೃಂದದವರು, ವೀರಶವ ಲಿಂಗಾಯತ ಮಹಾ ಸಭೆ, ಶರಣ ಸಾಹಿತ್ಯ ಪರಿಷತ್ ಸೇರಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಈ ಬಾರಿ ಜಯಂತಿಯನ್ನು ಜ್ಞಾನಯೋಗಾಶ್ರಮದ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ಆಚರಿಸಲು ವಿವಿಧ ಸಮಿತಿ ರಚಿಸಲಾಗಿದೆ. ವೀರಶೈವ ಲಿಂಗಾಯತ ಎಲ್ಲ ಒಳ ಪಂಗಡಗಳು ಜಯಂತಿಯಲ್ಲಿ ಭಾಗಿಯಾಗಲಿವೆ ಎಂದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಪ್ರೇಮಿಗಳು ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಮಾಜದ ಹಿರಿಯರಾದ ಕಾಶಿನಾಥ ಅಣೆಪ್ಪನವರ, ಈರಣ್ಣ ತೊಂಡಿಕಟ್ಟಿ, ಅಪ್ಪು ಇಟ್ಟಂಗಿ, ಮ.ಗು. ಯಾದವಾಡ, ಸಂ.ಗು. ಸಜ್ಜನ, ಬಿ.ಟಿ. ಈಶ್ವರಗೊಂಡ, ಅಮರೇಶ ಸಾಲಕ್ಕಿ, ಓಂಕಾರ ಅಥರ್ಗಾ, ಕುಮಾರಗೌಡ ಹರನಾಳ, ಎಂ. ಎಂ. ಅಂಗಡಿ, ಶಿವಾನಂದ ಸಂಖ ಇತರರಿದ್ದರು.