ಬಸವಣ್ಣನವರು ವಿಶ್ವಮಾನವ ಎಂದು ನಾವೆಲ್ಲ ಒಪ್ಪಿಕೊಳ್ಳಬೇಕು

SRP_13-04jpj
ಶ್ರೀರಂಗಪಟ್ಟಣದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಆಯೋಜಸಿದ್ದ 150ನೇ ಬೆಳದಿಂಗಳ ದೀಪಾರತಿ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಬಸವಣ್ಣನವರ ಭಾವಚಿತ್ರಕ್ಕೆ ತ್ರಿನೇತ್ರ ಶ್ರೀಗಳ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಲಾಯಿತು. ಎನ್.ಎಸ್.ಮಹದೇವ ಪ್ರಸಾದ್, ಡಾ.ಎಲಿಜಬೆತ್ ಚೆರಿಯನ್, ಆರ್.ಚಲುವರಾಜು ಇತರರು ಇದ್ದರು.
Published on

ಶ್ರೀರಂಗಪಟ್ಟಣ: ಬಸವಣ್ಣ ಎಂದರೆ ಒಂದು ಪಂಥಕ್ಕೆ ಸೀಮಿತವಲ್ಲ. ಒಂದೇ ಪಂಥದಲ್ಲಿ ಬಸವಣ್ಣ ಇದ್ದಿದ್ದರೆ ಯಾವ ಕ್ರಾಂತಿಯೂ ಸೃಷ್ಟಿಯಾಗುತ್ತಿರಲಿಲ್ಲ. ಹೀಗಾಗಿ ಜಗಜ್ಯೋತಿ ಬಸವಣ್ಣನವರನ್ನು ವಿಶ್ವಮಾನವ ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಚಂದ್ರವನದ ಪೀಠಾಧಿಪತಿ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಪಟ್ಟಣ ಹೊರವಲಯದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ 150ನೇ ಬೆಳದಿಂಗಳ ದೀಪಾರತಿ ಮತ್ತು ಬಸವ ಜಯಂತಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವ ಜಯಂತಿಯಂದು ಬಸವಣ್ಣನವರ ಭಾವಚಿತ್ರಕ್ಕೆ ಪೂಜಿಸಿದರೆ ಫಲವಿಲ್ಲ, ಬಸವಣ್ಣನವರ ಆದರ್ಶದೊಂದಿಗೆ ಬದುಕನ್ನು ಕಟ್ಟಿಕೊಂಡರೆ ಮಾತ್ರ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯ. ನಾವು ಆಡುವ ಮಾತುಗಳು ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ನಮ್ಮ ಮಾತು ಮತ್ತೊಬ್ಬರ ಮನಸ್ಸಿಗೆ ನೋವನ್ನುಂಟು ಮಾಡಬಾರದು. ನಮ್ಮ ಮಾತಿನಲ್ಲಿ ಪರಿಶುದ್ಧತೆ ಇರಬೇಕು. ನಮ್ಮ ಮಾತು ಬಾಂಧವ್ಯ ಬೆಸುಗೆಯಾಗಿರಬೇಕು ಎಂದು ವಿಶ್ವಗುರು ಬಸವಣ್ಣನವರು ಸಂದೇಶವನ್ನು ನೀಡಿದ್ದರು. 12ನೇ ಶತಮಾನದಲ್ಲಿ ಎಲ್ಲ ಜಾತಿ ಹಾಗೂ ವರ್ಗಗಳಿಗೂ ಸಮಾನತೆಯ ಪ್ರತೀಕವಾಗಿ ಅನುಭವ ಮಂಟಪವನ್ನು ನಿರ್ಮಿಸಿದ ಹೆಗ್ಗಳಿಕೆ ಎಂದರೆ ನಾವೆಲ್ಲರೂ ಎದೆತಟ್ಟಿ ಹೇಳಬೇಕು ಅದು ವಿಶ್ವಗುರು ಬಸವಣ್ಣ ಮಾತ್ರ ಎಂದರು.

ರೋಟರಿಯನ್ ಎನ್.ಎಸ್.ಮಹದೇವ ಪ್ರಸಾದ್ ಮಾತನಾಡಿ, ಮಠದಲ್ಲಿ ಜಾತಿ, ಮತ, ಪಂಥ, ಯಾವುದೇ ಭೇದವಿಲ್ಲದೇ ಎಲ್ಲರಿಗೂ ಒಳಿತಾಗಲಿ ಎಂದು ವಿಶೇಷವಾಗಿ ಸೈನಿಕರಿಗೆ ದೇಶ ಸೇವೆಗಾಗಿ ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಸಂಕಲ್ಪ ಮಾಡುತ್ತಿರುವುದು ನಮಗೆ ಬಹಳ ಸಂತೋಷವಾಗುತ್ತಿದೆ ಎಂದರು.

ರೋಟರಿಯನ್ ಡಾ.ಎಲಿಜಬೆತ್ ಚೆರಿಯನ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್.ಚಲುವರಾಜು, ಪ್ರೇಮಕುಮಾರಿ.ಜಿ, ಎಂ.ಎಸ್.ಉಮೇಶ್, ಉದ್ಯಮಿ ಕಲಾಶ್ರೀ, ಎಸ್.ಆರ್.ರೇಣುಕಾಸ್ವಾಮಿ, ಚಂದ್ರವನ ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಆಶ್ರಮದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್,ಕೆ.ವಿದ್ವಾನ್, ಗಂಗಣ್ಣ, ಮುರಗೋಡಿನ ಶ್ರೀದುರದುಂಡೀಶ್ವರ ಮಹಾಂತ ಶಿವಯೋಗಿ ಮಠದ ಟ್ರಸ್ಟಿ ವೀರಭದ್ರಪ್ಪ ಬಿ.ದೇಸಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net