

ಹನೂರು: ಸಮಾಜದ ಉದ್ಧಾರಕ್ಕೆ ಮಠಗಳು ಉತ್ತಮ ಸೇವೆಯನ್ನು ನೀಡುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಮಠದ ಸೇವೆ ಬಗ್ಗೆ ಭಕ್ತಿಯನ್ನು ಹೊಂದಬೇಕು. ಲಿಂಗವನ್ನು ಧರಿಸಿ ಪೂಜಿಸಬೇಕು ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹಲಗಾಪುರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ದೇಗುಲ, ಗುರುಮಲ್ಲೇಶ್ವರ ದಾಸೋಹ ಮಠ ಉದ್ಘಾಟನೆ ಹಾಗೂ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ವಿರಕ್ತ ಮಠ, ಪಟ್ಟದ ಮಠ, ಭಿಕ್ಷದ ಮಠ ಯಾವುದೇ ಮಠವಿರಲಿ ಎಲ್ಲವೂ ಕಾಯಕ ಹಾಗೂ ದಾಸೋಹದ ತತ್ವದೊಂದಿಗೆ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದು, ರಾಜ್ಯದ ಉದ್ದಗಲಕ್ಕೂ ಬೆಳಕನ್ನು ನೀಡುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕ್ಷರತೆ ಸಾಧಿಸುವಲ್ಲಿ ಮಠಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತವೆ. ಜತೆಗೆ ಆತ್ಮೋದ್ಧಾರ, ಲಿಂಗಪೂಜೆ, ಸಂಸ್ಕಾರ, ಮಕ್ಕಳಿಗೆ ಮಾರ್ಗದರ್ಶನ ಮಠಗಳಿಂದ ಆಗುತ್ತಿವೆ. ಆದ್ದರಿಂದ ಮಠಗಳ ಸೇವೆ ಅನನ್ಯವಾಗಿದ್ದು, ಇದರಲ್ಲಿ ಶ್ರೀಗಳ ಸೇವೆ ಅಪಾರ ಎಂದು ಹೇಳಿದರು.
ಶ್ರೀ ಗುರುಮಲ್ಲೇಶ್ವರರು ಅಂದಿನ ಕಾಲಘಟ್ಟದಲ್ಲೇ ಈ ಭಾಗದಲ್ಲಿ ಮನೆಗಳನ್ನೇ ದಾಸೋಹ ಮಠಗಳನ್ನು ಸ್ಥಾಪಿಸುವುದರ ಮೂಲಕ ಧಾರ್ಮಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಇದರ ಫಲವಾಗಿ ಮಠಗಳು ನಿರಂತರವಾಗಿ ಮುಂದುವರಿಯುತ್ತಿವೆ. ಮಠ ಹಾಗೂ ಭಕ್ತರಿಗೂ ಅವಿನಾಭಾವ ಸಂಬಂಧ ಹೊಂದಿದ್ದು, ಅಭಿವೃದ್ಧಿಯತ್ತ ಸಾಗುತ್ತಿವೆ. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಹದೇಶ್ವರರ ಪರಂಪರೆಯನ್ನು ಮುಂದುವರಿಸುತ್ತಾ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಒದಗಿಸುವುದರ ಜತೆಗೆ ಮಠದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಮೆಚ್ಚುಗೆ ಸಂಗತಿ ಎಂದರು.
ನೀರಾವರಿ ಯೋಜನೆ ಅಗತ್ಯವಿದೆ: ಈ ಭಾಗವು ಖುಷ್ಕಿ ಭೂಮಿ ಹೊಂದಿದ್ದು, ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಆದರೆ ಕಾವೇರಿ ನದಿ ಸಮೀಪದಲ್ಲಿಯೇ ಹರಿಯುತ್ತಿದ್ದರೂ ನೀರಾವರಿ ಯೋಜನೆಯ ಸೌಕರ್ಯ ಸಿಗದಿರುವುದು ವಿಪರ್ಯಾಸ. ಇದರಿಂದ ಈ ಭಾಗದ ಜನರ ಹೆಚ್ಚಿನ ಸಂಖ್ಯೆಯಲ್ಲಿ ನಗರದತ್ತ ಗುಳೆ ಹೋಗುತ್ತಿರುವುದಕ್ಕೆ ಕಾರಣವಾಗಿದೆ. ಹಾಗಾಗಿ ಜನರ ಬದುಕು ಹಸನಾಗಬೇಕಾದರೆ ಏತ ನೀರಾವರಿ ಯೋಜನೆಯಾಗಬೇಕು. ರಸ್ತೆ ಅಭಿವೃದ್ಧಿಯಾಗಬೇಕು ಎಂದರು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 1915ರಲ್ಲಿ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಶೇ.15ರಷ್ಟಿತ್ತು. ಆದರೀಗ ಶೇ.75ಕ್ಕೇರಿದೆ. ಇದಕ್ಕೆ ಮಠಗಳ ಶೈಕ್ಷಣಿಕ ಸೇವೆಯೇ ಕಾರಣ. ಹಾಗಾಗಿ ಮಠಗಳು ಊರಿಗೆ ಭೂಷಣ. ಅಭಿವೃದ್ಧಿಗೆ ಸಹಕಾರಿಯಾಗಿವೆ. ಭಕ್ತರ ಅವಿನಾಭಾವ ಸಂಬಂಧದಿಂದ ಮಠಗಳು ಉತ್ತಮ ದಿಕ್ಕಿನತ್ತ ಸಾಗುತ್ತಿವೆ. ಈ ದಿಸೆಯಲ್ಲಿ ಗ್ರಾಮದಲ್ಲಿ ಮಠ ಉದ್ಘಾಟನೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಮಳೆಯಾಗಿರಲಿಲ್ಲ. ಆದರೆ ಸಿದ್ಧಗಂಗಾ ಶ್ರೀಗಳು ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಉತ್ತಮ ಮಳೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮಳೆ, ಬೆಳೆ ಉತ್ತಮವಾಗಿ ಜನರ ಬದುಕು ಸಮೃದ್ಧಿಯಿಂದ ಕೂಡಿರಲಿ ಎಂದು ಆಶಿಸಿದರು.
ಕನಕಪುರ ದೇಗುಲದ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಸಮಾಜ ಸೇವಕ ನಿಶಾಂತ್ ಮಾತನಾಡಿದರು. ಮಲ್ಲನಮೂಲೆ ಕಂಬಳೀಶ್ವರ ಮಠದ ಚನ್ನಬಸವ ಸ್ವಾಮೀಜಿ, ಬಂಡಳ್ಳಿ ಮಠದ ಫಲಹಾರ ಪ್ರಭುದೇವ ಸ್ವಾಮೀಜಿ, ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡ ಮಠದ ಶ್ರೀಕಂಠ ಸ್ವಾಮಿ, ವಿವಿಧ ಮಠಾಧೀಶರು ಇದ್ದರು.