ಏ.30 ರಂದು ಬಸವ ಜಯಂತಿ

Basava Jayanti on April 30th
ಜಮಖಂಡಿಯ ಓಲೆಮಠದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಓಲೆಮಠದ ಆನಂದ ಶ್ರೀಗಳು ಮಾತನಾಡಿದರು. ವಿಶ್ವನಾಥ ಶ್ರೀಗಳು, ಶಿವಲಿಂಗ ಶ್ರೀಗಳು, ವಿಶ್ವನಾಥಶಾಸೀ ಶ್ರೀಗಳು ಇದ್ದಾರೆ.
Published on

ಜಮಖಂಡಿ: ಬಸವ ಜಯಂತಿ ಅಂಗವಾಗಿ ನಗರದ ಓಲೆಮಠದ ಆಶ್ರಯದಲ್ಲಿ ಏ.15 ರಿಂದ 29ರವರೆಗೆ ಪ್ರವಚನ, ಸಂಗೀತ ಕಾರ್ಯಕ್ರಮ ಹಾಗೂ ಏ. 30 ರಂದು ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಓಲೆಮಠದ ಆನಂದ ದೇವರು ಹೇಳಿದರು.

ಓಲೆಮಠದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಬಸವ ಜಯಂತಿ ಅಂಗವಾಗಿ ಏ.15ರಿಂದ ಪ್ರತಿ ದಿನ ಧರ್ಮಗುರುಗಳಿಂದ ಪ್ರವಚನದ ಮೂಲಕ ಧರ್ಮಕ್ರಾಂತಿ ಮಾಡಲಾಗುವುದು ಹಾಗೂ ವಿಶೇಷ ಸೇವೆ ಸಲ್ಲಿಸುತ್ತಿರುವ ವೈದ್ಯರು, ಭಾರತೀಯ ಸೇನೆಯ ಯೋಧರು, ಪೊಲೀಸರು, ಪತ್ರಕರ್ತರು, ವಿಕಲಚೇತನರು, ಪೌರಕಾರ್ಮಿಕರು ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ಪ್ರತಿದಿನ ಒಬ್ಬರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪ್ರತಿದಿನವೂ ಮಹಾಪ್ರಸಾದದ ದಾಸೋಹ ವ್ಯವಸ್ಥೆ ಮಾಡಲಾಗುವುದು ಎಂದರು.

ಪ್ರತಿದಿನ ಬೆಳಗ್ಗೆ ಶ್ರೀಗಳು ನಗರದ ವಾರ್ಡ್‌ಗಳಿಗೆ ಪಾದಯಾತ್ರೆ ಮೂಲಕ ತೆರಳಿ ಅರಿವಿನ ಜೋಳಿಗೆ ಹಿಡಿದು ವ್ಯಸನಿಗಳಿಂದ ವ್ಯಸನ ಭಿಕ್ಷೆ ಬೇಡಿ ವ್ಯಸನಮುಕ್ತ ನಗರವನ್ನಾಗಿಸುವ ಸಂಕಲ್ಪ ಮಾಡಲಾಗಿದೆ. ಈ ಕಾರ್ಯಕ್ಕೆ ನಗರಸಭೆ ಅಧಿಕಾರಿಗಳು ಸಹಕರಿಸಬೇಕು.

ಏ.30 ರಂದು ಬೆಳಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಹಾಗೂ ಬಸವಾದಿ ಶಿವಶರಣರ ಭಾವಚಿತ್ರಗಳ ಮೆರವಣಿಗೆ ನಡೆಸಲಾಗುವುದು. ಸಂಜೆ ರಥೋತ್ಸವ ಹಾಗೂ ಬಸವಣ್ಣನವರ ಮೂರ್ತಿ ಮೆರವಣಿಗೆಯೊಂದಿಗೆ ಬಸವ ಜಯಂತಿ ಮಂಗಲಗೊಳ್ಳಲಿದೆ ಎಂದರು.

ನಗರದ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೂವಿನ ಹಿಪ್ಪರಗಿಯ ವಿಶ್ವನಾಥ ಮಹಾಸ್ವಾಮಿಗಳು ಹಾಗೂ ಹುನ್ನೂರಿನ ವೇದಮೂರ್ತಿ ವಿಶ್ವನಾಥಶಾಸೀ ಕೊಣ್ಣೂರಮಠ ಸಾನ್ನಿಧ್ಯ ವಹಿಸಿದ್ದರು.

ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ, ವಕೀಲ ಎನ್.ಎಸ್. ದೇವರವರ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ಅರ್ಬನ್ ಬ್ಯಾಂಕ್ ನಿರ್ದೇಶಕ ಅರುಣಕುಮಾರ ಶಹಾ, ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ, ನಗರಸಭೆಯ ಸದಸ್ಯರಾದ ಸಿದ್ದು ಮೀಸಿ, ಕಿರಣ ಪಿಸಾಳ, ಸುನೀಲ ಶಿಂಧೆ, ಈಶ್ವರ ವಾಳೆನ್ನವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ಉದ್ದಿಮೆದಾರ ಧರ್ಮಲಿಂಗಯ್ಯ ಗುಡಗುಂಟಿ, ವಕೀಲ ಸಿ.ಎಸ್. ಬಾಂಗಿ, ಬಸಯ್ಯ ಹಿರೇಮಠ, ಕಸ್ತೂರಿ ಜೈನಾಪುರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net