

ಮಂಡ್ಯ: ಬಸವಣ್ಣ ಅವರು ಜಗತ್ತಿಗೆ ಹೊಸ ಹೊಸ ಪಾರಂಪಾರಿಕ ಹಾಗೂ ಪರಂಪರೆ ಸೃಷ್ಟಿ ಮಾಡಿ ಹೋಗಿದ್ದಾರೆ ಎಂದು ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ನಾಗರಾಜು ಹೇಳಿದರು.
ನಗರದ ವಿ.ವಿ ರಸ್ತೆಯಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಗುರು ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಜಗತ್ತು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಗೌರವಿಸುತ್ತಿದೆ. ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ್ದಾರೆ. ಭಕ್ತಿ ಮಾರ್ಗದಲ್ಲಿ ಶರಣತ್ವವನ್ನು ತಿಳಿಸಿದ್ದಾರೆ ಎಂದು ನುಡಿದರು.
ವೈದ್ಯನಾಥಪುರ ಕದಂಬ ಜಂಗಮ ಮಠದ ರೇಣುಕ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಜಗತ್ತಿಗೆ ಕಾಯಕವೇ ಕೈಲಾಸವೆಂದು ಶರಣತ್ವ ನೀತಿ ತಿಳಿಸಿದ ಮಹಾಮಾನವತವಾದಿ ಬಸವಣ್ಣ. ಅವರು ಹಾಕಿಕೊಟ್ಟ ವಚನಗಳ ರೂಪದಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಮಾತ್ರವಲ್ಲದೆ ಬದುಕಿನ ಸತ್ವವಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ನಿರ್ದೇಶಕರಾದ ಸಿ.ಎಂ.ಪುಟ್ಟಬುದ್ದಿ, ಶಿವಕುಮಾರಸ್ವಾಮಿ, ವಿಶ್ವೇಶ್ವರಯ್ಯ, ಎ.ಸಿ.ಲಿಂಗದೇವರು, ಎಚ್.ಸಿ.ಶಿವಕುಮಾರ್, ಎಂ.ಮಹದೇವಯ್ಯ, ಎಸ್.ಸಿ.ಉಮೇಶ್, ಮಲ್ಲೇಶ್, ಹೊನ್ನಮ್ಮ, ಶಕುಂತಲಾ, ನವೀನ್, ಮಹದೇವಸ್ವಾಮಿ ಇತರರಿದ್ದರು.