ಉಕ್ಕಲಗೆರೆ ಗ್ರಾಮದಲ್ಲಿ ಬಸವ ಜಯಂತಿ ಆಚರಣೆ

basavannaa
Published on


ತಿ.ನರಸೀಪುರ: ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಯುವಕರ ಸಂಘದಿಂದ ಶನಿವಾರ ವಿಜೃಂಭಣೆಯಿಂದ ಬಸವ ಜಯಂತಿ ಆಚರಿಸಲಾಯಿತು.


ಕಳ್ಳೀಪುರ ಮಠಾಧ್ಯಕ್ಷರಾದ ಗುರುಪಾದ ಸ್ವಾಮೀಜಿ ಗ್ರಾಮದ ಹೆಬ್ಬಾಗಿಲಿನಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಆಶೀರ್ವಚನ ನೀಡಿದ ಶ್ರೀಗಳು ಬಸವಣ್ಣ ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು. ಬಸವ ತತ್ವಗಳನ್ನು ಯಾರು ಬದುಕಿನಲ್ಲಿ ಆಚರಣೆ ಮಾಡುತ್ತಾರೋ ಅಂತಹವರ ಮನೆಯಲ್ಲಿ ಜಗಳಗಳು ಇರುವುದಿಲ್ಲ. ಎಲ್ಲರನ್ನೂ ಪ್ರೀತಿ ಮಾಡುವಂತಹ ವಿಶ್ವಕುಟುಂಬ ಭಾವನೆಯನ್ನು ಬಸವಣ್ಣ ಅವರು ಬಿತ್ತಿದ್ದಾರೆ. ಬಸವಣ್ಣ ಮಾನವರಲ್ಲಿ ದೇವರನ್ನು ಕಾಣಲು ಹೇಳಿದ್ದಾರೆ. ಮಾನವರಲ್ಲಿ ದೇವರನ್ನು ಕಂಡಾಗ ಅಲ್ಲಿ ಜಗಳಗಳು ಇರಲು ಸಾಧ್ಯವಿಲ್ಲ. ಎಲ್ಲ ವರ್ಗದವರಿಗೂ ಸಮಾನತೆಯ ಬದುಕನ್ನು ನೀಡಿದವರು ಬಸವಣ್ಣನವರು ಎಂದರು.


ಬಸವ ಜಯಂತಿ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಸಾವಿರಾರು ಜನಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.


ಸಂಜೆ ಶ್ರೀ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮತ್ತು ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನಾದಸ್ವರ, ಪೂಜಾ ಕುಣಿತ, ವೀರಗಾಸೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಯುವಕರ ಸಂಘದ ಆಡಳಿತ ಮಂಡಳಿ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net