ಸರ್ವ ಜನಾಂಗ, ಪ್ರಜಾಪ್ರಭುತ್ವದ ಪಿತಾಮಹ: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿಕೆ

Basava Jayanti celebration by Alliance organization
Published on

ಮಂಡ್ಯ: ವಿಶ್ವಗುರು ಬಸವಣ್ಣ ಹನ್ನೇರಡನೇ ಶತಮಾನದಲ್ಲಿಯೇ ಸರ್ವ ಜನಾಂಗದ ಪ್ರಜಾಪ್ರಭುತ್ವದ ಪಿತಾಮಹ ಆಗಿದ್ದರು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ವೀರಶೈವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ವಿಶ್ವ ಗುರು ಬಸವ ಜಯಂತಿ ಅಂಗವಾಗಿ ಬಸವಶ್ರೀ ಹಾಗೂ ಕಾಯಕ ಪ್ರಶಸ್ತಿ ಪ್ರದಾನ, ವಚನ ಗಾಯನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಪಂಚದ ಅನೇಕ ದೇಶಗಳಲ್ಲಿ ಬಸವಣ್ಣನವರ ಅನುಯಾಯಿಗಳು ಇದ್ದಾರೆ. ರಾಜ್ಯಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ಹೇಳಿದರು.

ಅಸ್ಪೃಶ್ಯತೆ ವಿರುದ್ದ ಹೋರಾಟ ಮಾಡಿ, ವೈದಿಕ ಧರ್ಮದ ಅನಿಷ್ಟ ಪದ್ದತಿ, ಮೂಢನಂಬಿಕೆಗಳ ವಿರುದ್ದ ಜಾಗೃತಿ ಮೂಡಿಸಿದರು. ಲಿಂಗಾಯತ ಧರ್ಮ ಸ್ಥಾಪಿಸಿ ಶರಣ ಸಂಸ್ಕೃತಿಗೆ ನಾದಿಯಾಡಿದರು. ಕಟ್ಟು ಪಾಡುಗಳಿದ್ದ ಸಮಾಜದಲ್ಲಿ ಹೊಸ ಬದಲಾವಣೆಗಾಗಿ ಶ್ರಮಿಸಿದರು. ವಿಶ್ವಗುರು ಬಸವಣ್ಣ ಎಂದೆಂದಿಗೂ ಪ್ರಸ್ತುತ. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ, ಕಾಯಕ, ಸ್ತ್ರೀ ಸಮಾನತೆ ಮಹತ್ವ ಕೊಡುವ ಮೂಲಕ ಜಾತೀಯತೆ ಅಳಿಸಲು ಪ್ರಧಾನ ಆದ್ಯತೆ ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ವ್ಯಕ್ತಿತ್ವ ಹೊಂದಿದವರು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಅಲಯನ್ಸ್ ಸಂಸ್ಥೆ 2ನೇ ಜಿಲ್ಲಾ ಗವರ್ನರ್ ಕೆ.ಎಸ್.ಚಂದ್ರಶೇಖರ್, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಮೋಹನ್‌ಕುಮಾರ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಎಂ.ಬಿ.ರಾಜಶೇಖರ್ ಮತ್ತು ಲೇಖಕಿ ಭವಾನಿ ಲೋಕೇಶ್‌ಗೆ ಬಸವಶ್ರೀ ಹಾಗೂ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗಾಯಕಿ ಡಾ.ವರ್ಷಾ ಹೂಗಾರ್ ಮತ್ತು ಡೇವಿಡ್ ವಚನ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net