ಮಸ್ಕತ್​ನಲ್ಲಿ ಬಸವ ಜಯಂತಿ ಆಚರಣೆ

muscat
Published on

ಮಸ್ಕತ್: ಅರಬ್ ರಾಷ್ಟ್ರವಾದ ಒಮಾನ್ ದೇಶದ ರಾಜಧಾನಿ ಮಸ್ಕತ್ ನಗರದ ಕೃಷ್ಣಮಂದಿರ ಸಭಾಂಗಣದಲ್ಲಿ ಬಸವ ಬಳಗದ ವತಿಯಿಂದ ಇತ್ತೀಚೆಗೆ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿದ್ದ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಸ್ಕತ್ ಬಸವ ಬಳಗ ಒಂದು ಮಾದರಿ ಕೂಟ. ಇಲ್ಲಿ ಎಲ್ಲರೂ ಸೇವಾಕರ್ತರು. ಅಧ್ಯಕ್ಷ, ಕಾರ್ಯದರ್ಶಿ ಎಂಬ ಪದಾಧಿಕಾರಿಗಳು ಇಲ್ಲದೇ ಮಾಡುವ ಕಾರ್ಯ ಮಾತ್ರ ತುಂಬಾ ಅಚ್ಚುಕಟ್ಟು ಎಂದು ಬಣ್ಣಿಸಿದರು. ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಂದುಗೂಡಿ ನಡೆಸುಕೊಂಡು ಹೋಗುತ್ತಿರುವ ಸೇವಾ ಕಾರ್ಯ ಶ್ಲಾಘನೀಯ. ಇಲ್ಲಿಂದ ನಾವು ತೆಗೆದುಕೊಂಡು ಹೋಗುವುದು ಹೆಚ್ಚಿದೆ ಎಂದರು.

ಗುರುವಣ್ಣ ದೇವರಮಠದ ಶ್ರೀ ನಂಜುಂಡ ಸ್ವಾಮೀಜಿ, ಅರಮೇರಿ ಮಠ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬೇವೂರ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಆಗಮಿಸಿದ್ದರು.

ಭಾರತೀಯ ರಾಯಭಾರಿ ಜಿ.ವಿ. ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಿದವು. ಬಸವಣ್ಣನವರು, ವಚನಗಳು ಕುರಿತು ಭಾಷಣ, ಹಾಡು, ವಿವಿಧ ನೃತ್ಯ, ತ್ರಿವಿಧ ದಾಸೋಹ ನಾಟಕ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಸುಮಾರು 700 ಕ್ಕೂ ಹೆಚ್ಚು ಜನರು ಸೇರಿದ್ದರು. ಎಲ್ಲರಿಗೂ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net