

ಗುಂಡ್ಲುಪೇಟೆ : ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಈ ಅಂಗವಾಗಿ ಬೆಳಗ್ಗೆ 9.30ಕ್ಕೆ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಅಲಂಕೃತ ವಾಹನದಲ್ಲಿ ಇರಿಸಿದ್ದ ಬಸವೇಶ್ವರ ಭಾವಚಿತ್ರಕ್ಕೆ ಸೋಮಹಳ್ಳಿ ವೀರಸಿಂಹಾಸನ ಶಿಲಾ ಮಠಾಧ್ಯಕ್ಷ ಶ್ರೀ ಸಿದ್ದಮಲ್ಲಪ್ಪಸ್ವಾಮೀಜಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಮಹಾಸಭಾ ತಾಲೂಕು ಅಧ್ಯಕ್ಷ ರವಿ ಕಮರಹಳ್ಳಿ, ಪ್ರಧಾನ ಕಾರ್ಯದರ್ಶಿ ಮಾಡ್ರಹಳ್ಳಿ ನಾಗೇಂದ್ರ, ಯುವಘಟಕದ ಅಧ್ಯಕ್ಷ ಗುರು ವೀರನಪುರ ಸೇರಿದಂತೆ ಎಲ್ಲ ಘಟಕದ ಪದಾದಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಅಲಂಕೃತ ಎತ್ತಿನ ಗಾಡಿಗಳು, ನಂದೀಧ್ವಜ, ಮಹಿಳಾ ಹಾಗೂ ಪುರುಷರ ವೀರಗಾಸೆ, ಕೇರಳದ ಚಂಡೆ ಮದ್ದಳೆ, ಹುಲಿವೇಷಧಾರಿಗಳು, ಕಂಸಾಳೆ, ಗೊರವರ ಕುಣಿತ ಸೇರಿದಂತೆ ಹತ್ತಾರು ಜನಪದ ಕಲಾತಂಡಗಳ ಜತೆಗೆ ಡಿಜೆಗಳ ಅಬ್ಬರದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಯುವಕರು ಹಾಗೂ ಮುಖಂಡರು ಸಂಗೀತಕ್ಕೆ ತಕ್ಕಂತೆ ಹೆಜ್ಜೆಹಾಕಿದರು. ಬಿಸಿಲ ಬೇಗೆಯನ್ನು ತಣಿಸುವ ಸಲುವಾಗಿ ಯುವಘಟಕದ ವತಿಯಿಂದ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು.
ಮಡಹಳ್ಳಿ ರಸ್ತೆ, ಬಸವೇಶ್ವರವೃತ್ತ, ಹಳೇ ಬಸ್ ನಿಲ್ದಾಣ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಕೋಡಹಳ್ಳಿ ಸರ್ಕಲ್, ಚಾಮರಾಜನಗರ ಜೋಡಿ ರಸ್ತೆಯ ಮೂಲಕ ಮೆರವಣಿಗೆ ಸಾಗಿತು. ಸೋಮೇಶ್ವರ ವಿದ್ಯಾರ್ಥಿನಿಲಯದಲ್ಲಿ ಸುಮಾರು 15 ಸಾವಿರ ಜನರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.
ಗಮನ ಸೆಳೆದ ಆಪರೇಷನ್ ಸಿಂಧೂರ ಪೋಸ್ಟರ್ಸ್: ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ನಡೆಸಿದ ಹತ್ಯಾಕಾಂಡಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರ ಬೆಂಬಲಿಸಿ ಯುವಕರು ಕೈಯಲ್ಲಿ ಪೋಸ್ಟರ್ ಹಿಡಿದು ಸೈನಿಕರಿಗೆ ನೈತಿಕ ಬೆಂಬಲ ಸೂಚುಸುವ ಮೂಲಕ ಜನರ ಗಮನ ಸೆಳೆದರು.
ತಾಲೂಕು ಘಟಕದ ಪರಿಶ್ರಮ
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಘಟಕ ಕಳೆದ ಒಂದು ತಿಂಗಳಿನಿಂದ ಶ್ರಮಿಸಿತ್ತು. ಮಹಾಸಭಾ ಪದಾದಿಕಾರಿಗಳು ಹಾಗೂ ಮುಖಂಡರು ಪ್ರತಿ ಗ್ರಾಮಗಳಿಗೂ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ. ಸಾವಿರಾರು ಅಭಿಮಾನಿಗಳು ಉದಾರವಾಗಿ ದೇಣಿಗೆ ನೀಡುವ ಜತೆಗೆ ಕೆಲವು ಹೊಣೆಗಳನ್ನು ವಹಿಸಿಕೊಂಡಿದ್ದರು. ಕಳೆದ ನಾಲ್ಕು ದಿನಗಳಿಂದ ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ಬಸವೇಶ್ವರ ಭಾವಚಿತ್ರ ಅಳವಡಿಸಿದ್ದರು. ಮೈಸೂರು ದಸರೆ ಮಾದರಿಯಲ್ಲಿ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ್ದರಿಂದ ಪಟ್ಟಣವು ಝಗಮಗಿಸುತ್ತಿತ್ತು. ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮತ್ತು ಶಿವಕುಮಾರಸ್ವಾಮಿಗಳಿಗೆ ಲೇಸರ್ ದೀಪ ಅಳವಡಿಸಿದ್ದರಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಎದ್ದುಕಾಣುತ್ತಿತ್ತು.