

ಮೈಸೂರು: ಜಗಜ್ಯೋತಿ ಬಸವಣ್ಣ 12ನೇ ಶತಮಾನದಲ್ಲಿ ಮಾನವಕುಲಕ್ಕೆ ಮಾರ್ಗದರ್ಶಕರಾಗಿ ಇಂದಿಗೂ ಸಹ ಪ್ರಸ್ತುತರಾಗಿದ್ದಾರೆ ಶಾಸಕ ತನ್ವೀರ್ ಸೇಠ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೂರ ದೃಷ್ಟಿಯ ಆಲೋಚನೆಗಳು ಅವರಲ್ಲಿ ಇತ್ತು. ಸಮಾಜವು ಯಾವ ರೀತಿ ಕಟ್ಟಬೇಕು ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದರು. ಬಸವಣ್ಣನವರ ತತ್ವದಲ್ಲಿ ಲಿಂಗಭೇದ ಇಲ್ಲ, ಜಾತಿಭೇದ ಇಲ್ಲ, ಸಮಾನತೆ ಭೇದ ಇಲ್ಲ. ಎಲ್ಲರನ್ನು ಅವರು ಸಮಾನವಾಗಿ ಕಂಡರು ಎಂದು ಸ್ಮರಿಸಿದರು.
ಬಸವಣ್ಣ ವಚನಗಳ ಮೂಲಕ ನೀಡಿರುವ ಸಂದೇಶವನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು. ‘ಇವ ಯಾರವಾ ಇವ ಯಾರವ ಇವ ನಮ್ಮವ ನಮ್ಮವ’ ಎಂಬ ವಚನಕ್ಕೆ ಮಾತ್ರ ಸೀಮಿತವಾಗದೆ ಎಲ್ಲರನ್ನು ಅಪ್ಪಿಕೊಂಡು ಎಲ್ಲರನ್ನು ಜತೆಗೆ ಕೊಂಡೊಯ್ಯುವ ಕಾರ್ಯ ಆಗಬೇಕು ಎಂದು ಹೇಳಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಬಸವಣ್ಣ ಅವರು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ತುಂಬ ಸರಳ ಭಾಷೆಯಲ್ಲಿ ಅವರು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದರು. ಬಸವಣ್ಣ ಅವರ ವಚನಗಳು ನಮಗೆ ಅನೇಕ ಸಂದರ್ಭದಲ್ಲಿ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ ಮಾತನಾಡಿ, ಬಸವಣ್ಣ ಈ ರಾಷ್ಟ್ರಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ಒಬ್ಬ ಮಹಾನ್ ಚೇತನ. ಮಾನವೀಯ ಮೌಲ್ಯಗಳು, ಸಾಮಾಜಿಕ ಸಮಾನತೆ, ಸರ್ವರಿಗೂ ಸಮಪಾಲು ಸಮ ಬಾಳು ಸಂದೇಶವನ್ನು 12ನೇ ಶತಮಾನದಲ್ಲಿಯೇ ನೀಡಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಮಾತನಾಡಿ, ಬಸವಣ್ಣ ಅವರನ್ನು ಜಗಜ್ಯೋತಿ ಎಂದು ಕರೆಯುತ್ತೇವೆ. ಅವರ ಬಗ್ಗೆ ಇವತ್ತು ನಡೆಯುವಂತಹ ಜಯಂತಿಯಿಂದ ಹಿಡಿದು ಮುಂದೆ ಬರುವಂತಹ ಜಯಂತಿಯವರೆಗೆ ಅವರ ಬಗ್ಗೆ ಸಭೆಗಳನ್ನು ಹೆಚ್ಚು ಮಾಡಬೇಕು, ಉಪನ್ಯಾಸ ಏರ್ಪಡಿಸುವುದರ ಜತೆಗೆ ಮುನ್ನೂರ ಅರವತ್ತು ದಿನವು ಆಚರಿಸಬೇಕು ಎಂದರು.
ನಮ್ಮ ಜೀವನದಲ್ಲಿ ಒಂದೇ ಒಂದು ಸಾಧನೆ ಮಾಡುತ್ತಾ ಹೋಗುತ್ತೇವೆ. ಆದರೇ ಬಸವಣ್ಣ ನವರದು ಸಮತೋಲನದ ವ್ಯಕ್ತಿತ್ವ, ಅವರು ರಾಜಕೀಯ ಕ್ಷೇತ್ರದಲ್ಲಿಯೂ ಸಹ ಇದ್ದರೂ, ಉತ್ತಮ ಆಡಳಿತಗಾರರಾಗಿ ಇದ್ದರೂ, ಸಾಮಾಜಿಕ ಸುಧಾರಣೆಯನ್ನು ತಂದರು. ಸರಿಸಮಾನತೆಯ ಮೂಲಕ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವ ಮೂಲಕ ಹಾಗೂ ಆಧ್ಯಾತ್ಮಿಕತೆಯಲ್ಲೂ ಸಹ ಅವರು ಇದ್ದರೂ ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಅವರ ವಚನ ಸಾಹಿತ್ಯಗಳು, ಧಾರ್ಮಿಕ ಗ್ರಂಥಗಳ ಸಾರಗಳು ಹೂವಿನ ರೀತಿಯಲ್ಲಿ ಇರುತ್ತದೆ. ಹೂಗಳ ಮಕರಂದವನ್ನು ನಾವು ತೆಗೆದಾಗ ಹೇಗೆ ಸಾರ ಸಿಗುತ್ತದೆಯೋ ಹಾಗೆಯೇ ಸರಳ ಭಾಷೆಯಲ್ಲಿ ನಮಗೆ ತಿಳಿಸಿಕೊಟ್ಟವರು ಬಸವಣ್ಣನವರು. ವಚನಗಳು ಎಂದರೆ ಸಂಸ್ಕೃತಿಯ ಸಾರ, ಜೀವನದ ಸಾರಾ, ಒಬ್ಬ ಮನುಷ್ಯ ಜೀವನದಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡು ಹೇಗೆ ಬದುಕಬಹುದು ಎಂಬುದನ್ನು ತೋರಿಸುವುದೇ ವಚನ ಎಂದು ಹೇಳಿದರು.
ಸಾಹಿತಿ ಡಾ. ರಾಜಶೇಖರ ಜಮದಂಡಿ ಮಾತನಾಡಿ, ಬಸವಣ್ಣ ಎಂದರೆ ನಮಗೆ ಅವರ ಸಾಮಾಜಿಕ ಕ್ರಾಂತಿ, ಸಾಮಾಜಿಕ ಸುಧಾರಣೆ ಇವೆಲ್ಲವೂ ನಮಗೆ ನೆನಪು ಬರುತ್ತದೆ. ಆ ದಿನದಲ್ಲಿ ನಮ್ಮ ಭಾರತ ಪ್ರಾಚೀನ ಕಾಲದಿಂದಲೂ ಸ್ನೇಹ, ಸೌಹಾರ್ದತೆ, ಆತ್ಮೀಯತೆಯ ಕಂಪನ್ನು ಸೇರಿಸಿ ಬಹುತ್ವದ ಏಕತೆಯೇ ನೆಲೆಗೊಂಡಿಸಿ ಕೊಟ್ಟಿರುವಂತಹದ್ದು, ಈ ನೆಲವನ್ನು ಅನೇಕ ಸಂತರು, ಸೂಫಿಗಳು, ದಾಶಿಯರು, ಎಲ್ಲರೂ ತಮ್ಮ ತಮ್ಮ ಆಧ್ಯಾತ್ಮಿಕ ತತ್ವದರ್ಷ ಚಿಂತನೆಗಳಲ್ಲಿ ಈ ಸಮಾಜಕ್ಕೆ ಪಣ ತೊಟ್ಟವರು ಎಂದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಹಾಗೂ ಇತರರು ಇದ್ದರು.