

ಬಂಟ್ವಾಳ: ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ಅರ್ಚನಾ ಭಟ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು ತಮ್ಮ ವಚನಗಳಿಂದ ಸಮಾಜ ಸುಧಾರಣೆಯ ಕೆಲಸ ಮಾಡಿದವರು. ಕಾಯಕವೇ ಕೈಲಾಸ ಎಂದು ಮಾನವ ಕುಲಕ್ಕೆ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರು ಎಂದು ಹೇಳಿದರು.
ಉಪತಹಸೀಲ್ದಾರ್ ರಾಜೇಶ್ ನಾಯ್ಕ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಬಂಟ್ವಾಳ ಕಂದಾಯ ನಿರೀಕ್ಷಕ ಜೆ.ಜನಾರ್ದನ್ ಸ್ವಾಗತಿಸಿ, ವಂದಿಸಿದರು.