

ಕುಶಾಲನಗರ:
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಕಾಯಕ, ದಾಸೋಹ ಪರಿಕಲ್ಪನೆಯು ಇಡೀ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಗಳು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು. ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಬಸವ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ಬಸವೇಶ್ವರರು ಎಂಬ ವಿಷಯದ ಕುರಿತು ಮಾತನಾಡಿದರು.
ಜಾತೀಯತೆ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತುವ ಮೂಲಕ ದೀನ ದಲಿತರ, ಕಾಯಕ ವರ್ಗಗಳ ಆಶಾಕಿರಣವಾಗಿದ್ದ ಬಸವಣ್ಣನವರು ದೇಹವೇ ದೇಗುಲವೆಂದು ಸಾರಿದರು. ವರ್ಗ, ಜಾತಿ, ಲಿಂಗ ಭೇದವನ್ನು ತೊಡೆದು ಹಾಕಲು ಇಷ್ಟಲಿಂಗವನ್ನು ನೀಡಿದರು. ಕ್ರಿ.ಶ. 12 ನೇ ಶತಮಾನದಲ್ಲಿ ಪ್ರಬಲವಾಗಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದರು. ಅಸ್ಪೃಶ್ಯತೆಯ ಕಾರಣಕ್ಕೆ ದೀನದಲಿತರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪ್ರಕರಣಗಳನ್ನು ಕಂಡು ತೀವ್ರವಾಗಿ ಖಂಡಿಸಿದವರು ಬಸವಣ್ಣ.
ಎಲ್ಲರೂ ದುಡಿಯಬೇಕು, ದುಡಿದದ್ದರಲ್ಲಿ ದಾಸೋಹ ಮಾಡಬೇಕು. ಆ ಮೂಲಕ ಸಮಾಜಕ್ಕೆ ದುಡಿಮೆಯ ಪಾಲನ್ನು ವಿನಿಯೋಗಿಸಬೇಕು ಎಂಬುದು ಶರಣರ ಸಂಕಲ್ಪವಾಗಿತ್ತು. ಹೀಗೆ ನಾಡಿನ ಸಾಂಸ್ಕೃತಿಕ–ಸಾಹಿತ್ಯಕ ಪರಂಪರೆಯಲ್ಲಿ ಬಸವಣ್ಣನವರ ಚಿಂತನೆಗಳು ಇಡೀ ವಿಶ್ವಕ್ಕೆ ಕೊಡುಗೆ ನೀಡಿವೆ ಎಂದರು.
ಕೊಡಗು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಡಾ. ಎಂ. ಸುರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಿರಂಜನ್, ಉಪನ್ಯಾಸಕರಾದ ಯೋಗಿತಾ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾಧಿಕಾರಿ ಯೋಗೇಂದ್ರ, ವಿವಿಧ ವಿಭಾಗದ ಬೋಧಕ ವೃಂದ ಮತ್ತು ಬೋಧಕೇತರ ವೃಂದವರು ಹಾಗೂ ಶಿಬಿರಾರ್ಥಿಗಳು ಇದ್ದರು.