ಬಸವಣ್ಣ ವಿಶ್ವ ಕಂಡ ಶ್ರೇಷ್ಠ ಮಾನವತವಾದಿ

basava jayanthi
Published on

ಮೈಸೂರು: ಬಸವಣ್ಣ ವಿಶ್ವ ಕಂಡ ಶ್ರೇಷ್ಠ ಮಾನವತವಾದಿ ಎಂದು ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ನಾಗರಾಜ ವಿ.ಬೈರಿ ಹೇಳಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲಿಯನ್ಸ್ ಕ್ಲಬ್ ಅಫ್ ಮೈಸೂರು ನಾಲ್ವಡಿ ಸಂಸ್ಥೆಯ ವತಿಯಿಂದ ಶಿವರಾಮ ಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವೀಯನ ನೆಲೆಯಲ್ಲಿ ಮನುಷ್ಯರನ್ನು ನೋಡಬೇಕು, ಪ್ರತಿಯೊಬ್ಬರ ಆತ್ಮ ಶುದ್ಧಿಗೆ ಪ್ರೇರೇಪಿಸಬೇಕು, ಆತ್ಮ ಸಂಸ್ಕಾರವಾಗದೆ ಮನುಷ್ಯನ ಏಳಿಗೆ ಸಾಧ್ಯವಿಲ್ಲ ಎಂದು ಬಸವಣ್ಣ ಅವರ ಅಭಿಪ್ರಾಯವಾಗಿತ್ತು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಬಸವಣ್ಣ ವಚನಕಾರ ಅಷ್ಟೇ ಅಲ್ಲದೆ ತತ್ವಜ್ಞಾನಿ, ಸಮಾಜ ಸುಧಾರಕ ಎಂಬ ನೆಲೆಯಲ್ಲಿಯೂ ಮಹತ್ವದ ಸಾಧನೆ ಮಾಡಿದ್ದಾರೆ. 12ನೇ ಶತಮಾನದಲ್ಲಿ ಜಾತಿಯ ತಾರತಮ್ಯದ ವಿರುದ್ಧ ಮೌಢ್ಯ ಕಂದಾಚಾರದ ವಿರುದ್ಧ ಬಸವಣ್ಣ ಸಮರ ಸಾರಿದ್ದರು. ಅವರ ಸಾಮಾಜಿಕ ಬದ್ಧತೆ ಇಂದಿಗೂ ಅನುಕರಣೀಯ. ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಪ್ರಥಮ ವ್ಯಕ್ತಿ ಕೂಡ ಬಸವಣ್ಣ ಎನ್ನುವುದು ಕನ್ನಡಿಗರ ಹೆಮ್ಮೆ ಎಂದು ಹೇಳಿದರು.

ಮೈಸೂರು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ಬಸವಣ್ಣನವರ ಅನುಭವ ಮಂಟಪದ ಆಶಯಗಳು, ಸಮಾನತೆ ವಿಶೇಷವಾಗಿ ಮಹಿಳಾ ಸಮಾನತೆ ಹಾಗೂ ಕಾಯಕವಿಲ್ಲದೆ ಬದುಕಿಗೆ ಅರ್ಥವಿಲ್ಲ ಎಂಬ ವಿಚಾರಗಳು ಜಗತ್ತಿಗೆ ಬಹುದೊಡ್ಡ ಸಂದೇಶ ನೀಡಿವೆ ಎಂದು ಹೇಳಿದರು.

ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಸಂಸ್ಥೆಯ ಅಧ್ಯಕ್ಷ ಎನ್.ಬೆಟ್ಟೇಗೌಡ ಮಾತನಾಡಿ, ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸವೆಂದು ಸಾರಿ ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ ಶಿವಶರಣ ರೆಂದು ಕರೆದರು ಎಂದು ಹೇಳಿದರು.

ಲಯನ್ಸ್ ರಾಜ್ಯಪಾಲ ಡಾ. ಎಸ್. ವೆಂಕಟೇಶ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಇಂದಿರಾ ವೆಂಕಟೇಶ್, ಕೃಷ್ಣಾಜಿರಾವ್, ಪ್ರವೀಣ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net