

ಬನ್ನೂರು: ಕಾಯಕದಲ್ಲಿಯೇ ಕೈಲಾಸ ನೋಡು ಎಂದು ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದು, ಅವರ ತತ್ವಗಳು ನಿತ್ಯ ನೂತನ ಎಂದು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ ಹೇಳಿದರು.
ಇಲ್ಲಿನ ವಿನಾಯಕ ಕಾಲನಿಯ ಗಣೇಶ ದೇವಸ್ಥಾನದಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರ ವಚನದ ತತ್ವಗಳು ಅಚ್ಚಳಿಯದೇ ಮನುಕುಲ ಇರುವವರೆಗೂ ಇರಲಿವೆ. ಸಮಾಜದ ಅಭಿವೃದ್ಧಿಗೆ ಜಾತಿ ಪದ್ಧತಿಯೇ ಅಡ್ಡಗಾಲೆಂದು ಅರಿತಿದ್ದ ಅವರು ಜಾತಿ ಪದ್ಧತಿ, ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅಡಿಪಾಯ ಹಾಕಿದ್ದರು. ಆದರೆ ವಿಷಾದದ ಸಂಗತಿಯೆಂದರೆ ಜಾತಿ ಪದ್ಧತಿಯನ್ನು ಇನ್ನೂ ನಿರ್ಮೂಲನೆ ಆಗಿಲ್ಲ ಎಂದರು.
ನವ ಸಮಾಜ ನಿರ್ಮಾಣಕ್ಕೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಸವಣ್ಣನವರ ಕೊಡುಗೆ ಅಪಾರ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಹೆಣ್ಣು ಮಕ್ಕಳಿಗೂ ಸಮಾನ ಪ್ರಾತಿನಿಧ್ಯ ನೀಡಿದವರು. ಅನುಭವ ಮಂಟಪದ ಮೂಲಕ ಸರ್ವ ಸಮಾಜವನ್ನು ಒಂದೆಡೆ ಸೇರಿಸಿ ನವ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಅವರ ಆದರ್ಶಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರು ಕೊಟ್ಟ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಎಸ್.ಪಿ.ಯೋಗಣ್ಣ, ನಾರಾಯಣಗೌಡ, ಅರುಣ್‌ಕುಮಾರ್‌ಗೌಡ, ಸವಿತಾಗೌಡ, ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ, ವಿಕ್ರಮ್‌ಅಯ್ಯಂಗಾರ್, ಶ್ರೀಧರ್, ಪ್ರವೀಣ್, ಮಹದೇವಸ್ವಾಮಿ, ನಂಜುಂಡಸ್ವಾಮಿ, ಸ್ಪಂದನಾ, ಚಂದ್ರಶೇಖರ್‌ಪಾಟೀಲ್, ರಕ್ಷಾ ಪ್ರಭು ಸೇರಿದಂತೆ ಪ್ರಮುಖರು ಇದ್ದರು.