

ಚನ್ನಗಿರಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಮಾಡಿ ನಿವೃತ್ತಿಯಾದ ನಂತರ ಮನೆಯಲ್ಲಿ ಸುಮ್ಮನೆ ಕೂರದೇ ಮುಂದಿನ ಪೀಳಿಗೆಗೆ ಅನುಭವವನ್ನು ದಾಟಿಸಬೇಕು ಎಂದು ಹಾಲಸ್ವಾಮಿ ವಿರಕ್ತ ಮಠದ ಡಾ. ಬಸವ ಜಯಚಂದ್ರ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಮಹಾಸಭೆ, ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದರು.
ನಿವೃತ್ತಿ ನಂತರದಲ್ಲಿ ಸಮಾಜದ ಹಿರಿಯ ಗೌರವಾನ್ವಿತ ವ್ಯಕ್ತಿಗಳಾಗಿ, ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ಇದ್ದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಗುರು ಇಲ್ಲದ ಮಠ, ಹಿರಿಯರಿಲ್ಲದ ಮನೆ, ಶಿಕ್ಷಕರಿಲ್ಲದ ಕಲಿಕೆ ಸ್ಮಶಾನವಿದ್ದಂತೆ. ನಿವೃತ್ತಿ ಎಲ್ಲರಿಗೂ ಸಹಜ. ಶಾಲೆಗಿಂತ ಅಧಿಕವಾಗಿ ಜೀವನದ ಅನುಭವ ಅನೇಕ ಪಾಠಗಳನ್ನು ಕಲಿಸುತ್ತದೆ. ಅದನ್ನು ಬೇರೆಯವರಿಗೆ ಧಾರೆ ಎರೆಯಬೇಕು. ಜೀವಿತದ ಕೊನೆಯ ತನಕವು ಇನ್ನೊಬ್ಬರಿಗೆ ಮಾರ್ಗದರ್ಶಕರಾಗಬೇಕು ಎಂದರು.
ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಸರ್ಕಾರಿ ನೌಕರಿಗೆ ಸೇರಿದ ದಿನವೇ ನಿವೃತ್ತಿಯ ದಿನಾಂಕ ನಿಗದಿಯಾಗಿರುತ್ತದೆ. ಸರ್ಕಾರಿ ಸೇವೆಯಲ್ಲಿ ಕ್ರಿಯಾಶೀಲರಾಗಿರುವಂತೆ ನಿವೃತ್ತಿ ನಂತರವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ, ಧಾರ್ವಿುಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಲವಲವಿಕೆಯಿಂದ ಇರಬೇಕು ಎಂದರು.
ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಸರ್ಕಾರಿ ನೌಕರ ವರ್ಗವೇ ಕಾರಣ. ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದು ಬಿಡುತ್ತದೆ. ಅದನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ತಳಮಟ್ಟದ ಅಧಿಕಾರಿಗಳಿಂದ ಉನ್ನತ ಮಟ್ಟದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ತಲುಪಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರಿ ನೌಕರರು ಸಮಾಜದ ಒಳತಿಗಾಗಿ ನಿಮ್ಮ ಅನುಭವವನ್ನು ಸಮಾಜಕ್ಕೆ, ಜನಪ್ರತಿನಿಧಿಗಳಿಗೆ ನೀಡಬೇಕು. ಉಬ್ರಾಣಿ ಏತ ನೀರಾವರಿ ಯೋಜನೆಯಡಿ ಬಿಟ್ಟು ಹೋಗಿರುವ ಕೆರೆಗಳನ್ನು ಯೋಜನೆಯಡಿ ಸೇರಿಸುವ ಕೆಲಸ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಾಹಿತಿ ಸರೋಜ ನಾಗರಾಜ್ ಪಾಂಡೋಮಟ್ಟಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷ ಎ. ತೀರ್ಥಪ್ಪ ವಹಿಸಿದ್ದರು. 75 ವರ್ಷ ತುಂಬಿದ ಸಂಘದ ಹಿರಿಯ 35 ಸದಸ್ಯರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಂಘದ ಕಾರ್ಯದರ್ಶಿ ಜಿ. ಚಿನ್ನಸ್ವಾಮಿ, ಓಂಕಾರಪ್ಪ, ಸಿದ್ದಲಿಂಗಪ್ಪ, ಮಹೇಶ್ವರಪ್ಪ, ಎಂ.ಯು. ಚನ್ನಬಸಪ್ಪ, ಮಲ್ಲಿಕಾರ್ಜುನಪ್ಪ, ಎಸ್.ಟಿ. ಶಾಂತಗಂಗಾಧರ್, ಪಾಲಯ್ಯ, ಗೋಪಾಲಪ್ಪ, ತಿಮ್ಮಪ್ಪ, ಗಂಗಾಧರಪ್ಪ ಇದ್ದರು.