

ಕೂಡಲಸಂಗಮ: ನಮ್ಮ ಸರ್ಕಾರ 2018ರಲ್ಲಿಯೇ ಕೂಡಲಸಂಗಮ ಬಸವ ಅಂತಾರಾಷ್ಟ್ರೀಯ ಕೇಂದ್ರ ನಿರ್ಮಾಣಕ್ಕೆ 139 ಕೋಟಿ ರೂ. ಅನುದಾನ ನೀಡಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅನುದಾನವನ್ನು ಸಮಪರ್ಕ ಬಳಕೆ ಮಾಡದೆ ನಿರ್ಲಕ್ಷ ವಹಿಸಿದರ ಪರಿಣಾಮ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಯೋಜನಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ನನ್ನನ್ನು ಸಮಿತಿಯ ಅಧ್ಯಕ್ಷನಾಗಿ ನೇಮಿಸಿದ್ದಾರೆ. ಈಗಾಗಲೇ ಎರಡು ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂ ನಿರ್ಮಾಣಕ್ಕೆ ನಮ್ಮ ಸರ್ಕಾರ ಎಲ್ಲ ರೀತಿಯ ಅನುದಾನ ಕೊಡಲು ಸಿದ್ಧವಿದೆ ಎಂದರು.
ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮಕೈಗೊಂಡು, ಪುನಃ ಕಾಮಗಾರಿ ಆರಂಭಿಸುವಂತೆ ಆಯುಕ್ತರಿಗೆ ಸೂಚಿಸಿದರು.
ಮಂಡಳಿ ಆಯುಕ್ತ ಮಹಾದೇವ ಮುರಗಿ, ಪುನರ್ ವಸತಿ ಪುನರ್ ನಿರ್ಮಾಣ ಇಲಾಖೆ ಅಧೀಕ್ಷಕ ಅಭಿಯಂತರೆ ಎನ್. ಸುಜಾತಾ, ಯುಕೆಪಿ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಹಿರೇಗೌಡರ, ವಿನ್ಯಾಸ ಸಲಹೆಗಾರ ಬಸವರಾಜ ಪೂಜಾರಿ ಮತ್ತಿತರರಿದ್ದರು.