ಬೆಂಗಳೂರು: ವಚನ ಸಾಹಿತ್ಯವನ್ನು ವಿಕೃತಗೊಳಿಸುತ್ತಿರುವುದು, ಬಸವಾದಿ ಶರಣ ದರ್ಶನದ ವಿಕಾಸ ಮತ್ತು ಅವುಗಳ ಅನುಷ್ಠಾನಕ್ಕೆ ಬರುತ್ತಿರುವ ಅಡೆತಡೆಗಳ ಕುರಿತು ಬಸವ ತತ್ವಾಭಿಮಾನಿಗಳು ಇತ್ತೀಚೆಗೆ ಆತ್ಮಾವಲೋಕ ಸಭೆ ನಡೆಸಿದರು.
ಬಸವ ಸಮಿತಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ 70 ಕ್ಕೂ ಹೆಚ್ಚು ಬಸವತತ್ವ ಚಿಂತಕರು, ಸಾಹಿತಿಗಳು, ಪ್ರಾಧ್ಯಾಪಕರು, ವಿದ್ವಾಂಸರು ಹಾಗೂ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಲಿಂಗಾಯತ ಧರ್ಮದ ಮೇಲೆ ಮತ್ತು ಲಿಂಗಾಯತ ಮಠಗಳು ಮತ್ತು ಸ್ವಾಮೀಜಿಗಳ ಮೇಲೆ ನಡೆಯುತ್ತಿರುವ ಆಕ್ರಮಣ ಹಾಗೂ ಲಿಂಗಾಯತದ ಧರ್ಮಗ್ರಂಥವಾದ ವಚನ ಸಾಹಿತ್ಯ’ವನ್ನು ವಿಕೃತಗೊಳಿಸುತ್ತಿರುವ ಶಕ್ತಿಗಳ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಮತ್ತು ಈ ಹೋರಾಟವನ್ನು ರಾಜ್ಯದ ಎಲ್ಲ ಭಾಗಗಳಿಗೂ ಹೇಗೆ ವಿಸ್ತರಿಸಬೇಕೆಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ನೇತೃತ್ವವನ್ನು ಸಾಣೇಹಳ್ಳಿ ಶ್ರೀಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಸಭೆಯ ಸಾನ್ನಿಧ್ಯವನ್ನು ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿಗಳು ವಹಿಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಮುಕುಂದರಾಜ್, ಹಿರಿಯ ಸಾಹಿತಿ ಗೊರುಚ, ಎಲ್. ಹನುಮಂತಯ್ಯ, ಶರಣ ಅರವಿಂದ ಜತ್ತಿ, ಲೀಲಾ ಸಂಪಿಗೆ ಮತ್ತಿತರ ಗಣ್ಯರ ಸಲಹೆ ಮೇರೆಗೆ ಕೆಳಕಂಡ ನಿರ್ಣಯಗಳನ್ನು ಕೈಗೊಂಡಿರುವುದಾಗಿ ಡಾ.ಟಿ.ಆರ್.ಚಂದ್ರಶೇಖರಯ್ಯ, ಡಾ.ಎಚ್.ಎಂ.ಸೋಮಶೇಖರಪ್ಪ, ಎಚ್.ಸಿ.ಉಮೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವಲ್ಲ.
ಹಿಂದೂ ಧರ್ಮದ ಭಾಗವೆಂದು ಹೇಳುವ ಲಿಂಗಾಯತ ಸ್ವಾಮಿಗಳ ನಿಲುವಿಗೆ ಖಂಡನೆ.
ಸಾಣೆಹಳ್ಳಿ ಶ್ರೀಗಳ ಮೇಲಿನ ದಾಳಿಗೆ ಖಂಡನೆ.
ಲಿಂಗಾಯತ ಸಮಾಜ ಸಂಘಟನೆಗಾಗಿ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶಕ್ಕೆ ನಿರ್ಧಾರ.
ಲಿಂಗಾಯತ ಧರ್ಮಕ್ಕೆ ವಿರುದ್ಧವಾದ ಗೊಡ್ಡು ಆಚರಣೆಗಳಿಂದ ದೂರವಿರಲು ಕರೆ.
ಲಿಂಗಾಯತರು ಬಸವ ಸಂವಿಧಾನಕ್ಕೆ ಅನುಸಾರವಾಗಿ ನಡೆದುಕೊಳ್ಳಲು ಕರೆ.
ವಚನ ಸಾಹಿತ್ಯ ವಿಕೃತಗೊಳಿಸುವುದಕ್ಕೆ ಖಂಡನೆ.