

ಭಾಲ್ಕಿ: ಮನುಷ್ಯನ ಸಾರ್ಥಕ ಜೀವನಕ್ಕಾಗಿ ಶರಣರ ವಾಣಿ ಆಲಿಸಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಕದಲಾಬಾದ್ ಗ್ರಾಮದ ಬಸವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಶನಿವಾರ ಆಯೋಜಿಸಿದ್ದ ಬಸವ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವಾದಿ ಶರಣರು ವಚನಗಳ ರೂಪದಲ್ಲಿ ಮನುಕುಲದ ಒಳಿತಿಗೆ ಅದ್ಬುತ ಕೊಡುಗೆ ನೀಡಿದ್ದಾರೆ. ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸದಾಕಾಲ ಶರಣರ, ಮಹಾತ್ಮರ ಚಿಂತನೆಗಳು ಆಲಿಸಬೇಕು ಎಂದರು.
ಶ್ರಾವಣ ಭಗವಂತನ ಸಾಮೀಪ್ಯಕ್ಕೆ ಕೊಂಡೊಯ್ಯುವ ಮಾಸವಾಗಿದೆ. ತಿಂಗಳ ಪರ್ಯಂತ ಎಲ್ಲೆಡೆ ಜಪ, ತಪ, ಪೂಜೆ ಪುನಸ್ಕಾರ, ಪ್ರವಚನ ನಡೆಯುತ್ತವೆ. ಪ್ರತಿಯೊಬ್ಬರೂ ಶರಣರ, ಮಹಾತ್ಮರ ಚಿಂತನೆಗಳು ಜೀವನದಲ್ಲಿ ಆಚರಣೆಗೆ ತರಬೇಕು. ಪ್ರವಚನ ಆಲಿಸುವುದರಿಂದ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಉಲ್ಲಾಸಿತ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗ್ರಾಮದ ಪ್ರಮುಖರಾದ ಕಾಶಪ್ಪ ಪಾಟೀಲ್, ಚಂದ್ರಕಾಂತ ಬಿರಾದಾರ್, ರಾಮಶೆಟ್ಟಿ ಬಿರಾದಾರ್, ಬಮಶೆಟ್ಟಿ ಬಿರಾದಾರ್, ಅಶೋಕ ಬಿರಾದಾರ್, ಶಿವಶರಣಪ್ಪ ಮಣಂಗೇಪುರೆ, ಕಿರಣ ಬಿರಾದಾರ್, ಸುಧಾಕರ ಬಿರಾದಾರ್, ರೂಪೇಶ ಬಿರಾದಾರ್ ಇತರರಿದ್ದರು.
ಭಗವಂತ ಅದ್ಭುತ ಭೂಮಂಡಲ ಸೃಷ್ಟಿಸಿದ್ದಾನೆ. ಸುಂದರ ನಿಸರ್ಗವನ್ನು ಕೊಡುಗೆಯಾಗಿ ನೀಡಿದ್ದಾನೆ. ಇದನ್ನು ಕೆಡಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.
| ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ